ಜನರ ಶಾಪಕ್ಕೆ ಕಾಂಗ್ರೆಸ್‌ನವ್ರು ಒಳಗಾಗ್ತಾರೆ: ಆರಗ ಜ್ಞಾನೇಂದ್ರ

Public TV
2 Min Read

ಬೆಂಗಳೂರು: ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ ಅವರು ಗಳಿಸಿಕೊಂಡಿದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ. ಇವರು ಜನರ ಶಾಪಕ್ಕೆ ಕಾಂಗ್ರೆಸ್ ಅವರು ಒಳಗಾಗುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಸಕ್ಸಸ್ ಆಗಿದೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಇವರ ಪಾದಯಾತ್ರೆ ಸಾಮಾನ್ಯ ಜನರಿಗೆ ಆತಂಕವನ್ನು ತಂದಿದೆ. ಇವರಿಂದಾಗಿ ಕೇಸ್ ಉಲ್ಬಣವಾಗಿ ಲಾಕ್‌ಡೌನ್ ಆದರೆ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದರು.

ಕಾಂಗ್ರೆಸ್ ಅವರ ಪಾದಯಾತ್ರೆಗೆ ಜನ ಉಗಿಯುತ್ತಿದ್ದಾರೆ. ಜನರ ಸಹಾನುಭೂತಿ ಅವರಿಗೆ ಸಿಗಲ್ಲ. ನಿನ್ನೆ 43ಕ್ಕೂ ಅಧಿಕ ಜನರ ಮೇಲೆ ಮೇಲೆ ಪುನ: ಎಫ್‌ಐಆರ್ ದಾಖಲಾಗಿದೆ. ಕೇಸ್ ದಾಖಲಾಗಿದೆ, ಕಾನೂನು ಕ್ರಮ ಆಗುತ್ತದೆ. ಕಾನೂನು ಕ್ರಮದಿಂದ ಅವರು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್

ರಾಜಕೀಯ ಪಕ್ಷವಾಗಿ ಈಗ ಪಾದಯಾತ್ರೆ ಮಾಡಬಾರದಿತ್ತು. ಕಾಂಗ್ರೆಸ್‌ಗೆ ಖಂಡಿತಾ ಒಳ್ಳೆಯದಾಗಲ್ಲ, ಜನ ಇವರಿಗೆ ಬುದ್ಧಿ ಕಲಿಸುತ್ತಾರೆ. ರಾಮನಗರದಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚಿಸಿದ್ದೇವೆ. ಪಾದಯಾತ್ರೆಯಿಂದ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ‌ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ

ರೇಣುಕಾಚಾರ್ಯ, ಸುಭಾಷ್ ಗುತ್ತೇದಾರರಿಂದ ಕೋವಿಡ್ ನಿಯಮ ಉಲ್ಲಂಘನೆ ವಿಚಾರವಾಗಿ ಮಾತನಾಡಿದ ಅವರು, ಅವರಿಬ್ಬರೂ ಮಾಡಿದ್ದು ಖಂಡಿತಾ ತಪ್ಪು. ರೇಣುಕಾಚಾರ್ಯ ಕ್ಷಮೆ ಕೇಳಿದ್ದಾರೆ. ಸುಭಾಷ್ ಗುತ್ತೇದಾರ್ ಅವರಿಗೂ ಹೀಗೆಲ್ಲ ಮಾಡದಂತೆ ಸೂಚಿಸಿದ್ದೇವೆ ಎಂದರು.

ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಸ್ಪರ್ಧೆ ಇದೆ. ಇಬ್ಬರ ಮಧ್ಯೆ ನಡಿಗೆ ಸ್ಪರ್ಧೆ ನಡಿಯುತ್ತಿದೆ. ನಮ್ಮ ಬೊಮ್ಮಾಯಿ ಸದ್ಯಕ್ಕೆ ಇದರ ಅಂಪೈರ್ ಆಗಿದ್ದಾರೆ. ಜನ, ಅಂಪೈರ್ ಇಬ್ಬರು ಸೇರಿ ಖಂಡಿತಾ ಇದರ ಬಗ್ಗೆ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಡಿಕೆಶಿ ಶಾಲಾ ಮಕ್ಕಳ ಜೊತೆ ಮಾಸ್ಕ್ ಇಲ್ಲದೇ ಬೆರೆತಿದ್ದಾರೆ. ಇದು ಅಮಾನವೀಯ ಘಟನೆಯಾಗಿದೆ. ಡಿಕೆಶಿಗೆ ಟೆಸ್ಟ್ ಮಾಡಲು ಅಧಿಕಾರಿಗಳನ್ನು ಕಳಿಸಿದರೆ ಗದರಿಸಿ ಕಳುಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Araga Jnanendra

ಲಾಕ್‌ಡೌನ್ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಜ್ಞರ ಅಭಿಪ್ರಾಯಗಳನ್ನು ಸರ್ಕಾರ ಎದುರು ನೋಡುತ್ತಿದೆ. ಬಹಳ ಟಫ್ ರೂಲ್ಸ್ ತರಲು ತಜ್ಞರ ಅಭಿಪ್ರಾಯವನ್ನೂ ಪರಿಗಣಿಸುತ್ತೇವೆ. ನಾಳೆ ಲಾಕ್‌ಡೌನ್ ಆಗುವ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಅವರೇ ಅದರ ಹೊಣೆಯನ್ನು ಹೊರಬೇಕು. ಕೇಸ್ ಹೆಚ್ಚಾದರೆ ಕಾಂಗ್ರೆಸ್ಸಿಗರೇ ಕಾರಣ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *