ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ : ಬಿಜೆಪಿ

Public TV
2 Min Read

ಬೆಂಗಳೂರು: ರಾಮನಗರ ಜಟಾಪಟಿ ಪ್ರಕರಣ ಹಿನ್ನೆಲೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಟ್ವೀಟ್ ವಾರ್ ನಡೆಸುತ್ತಿವೆ. ಡಿ.ಕೆ ಸುರೇಶ್ ವಿರುದ್ಧವಾಗಿ  ಬಿಜೆಪಿ ಸರಣಿ ಟ್ವೀಟ್ ಮಾಡಿ ವಾಗ್ದಾಳಿ ಮಾಡಲಾಗಿದೆ.

ಕಾಂಗ್ರೆಸ್ ಸಂಸದ #DKSuresh ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಕೆಂಪೇಗೌಡರು ಆಳಿದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತೋರಿದ ಗೂಂಡಾ ವರ್ತನೆ ಖಂಡನೀಯ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ.ಇಂತಹ ಅನೈತಿಕ ರಾಜಕಾರಣದ ಮೂಲಕ ಕಾಂಗ್ರೆಸ್ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ? ಬಿಜೆಪಿ ಸರ್ಕಾರದ ಅಭಿವೃದ್ಧಿಪರ ರಾಜಕಾರಣದ ಮುಂದೆ ಕನಕಪುರದ ರೌಡಿ ಸಹೋದರರ ಧಮ್ಕಿ ರಾಜಕಾರಣ ನಡೆಯುವುದಿಲ್ಲ. ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದಲ್ಲಿ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವೀಗ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ. ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.  ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

ನಡೆದಿದ್ದೇನು?: ಬಸವರಾಜ ಬೊಮ್ಮಾಯಿ ಅವರು ರಾಮನಗರ-ಮಾಗಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಬಿಜೆಪಿಯ ಸಚಿವರ ನಡುವೆ ಜಟಾಪಟಿ ನಡೆದಿತ್ತು. ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಸ್ಥಳೀಯರ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಲ್ಲೇ ಗಲಾಟೆ ಮಾಡಿದ್ದರು. ರಾಮನಗರ ಡಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಎಂಎಲ್‍ಸಿ ಎಸ್.ರವಿ ಬರುವ ಪಾಲ್ಗೊಳ್ಳುವ ಮುನ್ನವೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ತೆಗೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *