ಡಿಸೆಂಬರ್‌ 31ಕ್ಕೆ ಕರ್ನಾಟಕ ಬಂದ್‌

Public TV
2 Min Read

ಬೆಂಗಳೂರು: ಎಂಇಎಸ್‌ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಡಿಸೆಂಬರ್‌ 31 ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

ಖಾಸಗಿ ಹೋಟೆಲ್‌ನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್‌ ಆಗಲಿದೆ. ಬಂದ್‌ ದಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಟೌನ್‌ಹಾಲ್‌ನಿಂದ ಬೃಹತ್‌ ಮೆರವಣಿಗೆ ನಡೆಯಲಿದೆ. ಹೋರಾಟಕ್ಕೆ ಚಲನಚಿತ್ರ ನಟರೂ ಬೆಂಬಲ ಸೂಚಿಸಲಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!

ಎಂಇಎಸ್ ಪುಂಡಾಟಿಕೆ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಬೆಳಗಾವಿಯಲ್ಲಿ ಕನ್ನಡ ಧ್ವಜ, ಕನ್ನಡಿಗರ ಪ್ರತಿಮೆಗಳಿಗೆ ರಕ್ಷಣೆ ನೀಡಬೇಕು. ಬೆಳಗಾವಿ ಮತ್ತು ಗಡಿ ಗ್ರಾಮಗಳಲ್ಲಿ ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕು. ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ವಾಟಾಳ್‌ ನಾಗರಾಜ್‌, ಸರ್ಕಾರ ಇದೆಯಾ, ಕರ್ನಾಟಕದಲ್ಲಿ ಪೊಲೀಸರು ಇದ್ದಾರಾ? ರಾಜ್ಯದಲ್ಲಿ ಗೂಂಡಾಗಿರಿ, ದಬ್ಬಾಳಿಕೆ ನಡೆಯುತ್ತಿದೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇಂದೇ ಎಂಇಎಸ್‍ಗೆ ನಿಷೇಧ ಹೇರಿ ಇಲ್ಲದಿದ್ದರೆ ಕರ್ನಾಟಕ ಬಂದ್‍ಗೆ ಕರೆ: ವಾಟಾಳ್ ನಾಗರಾಜ್

ಬೆಳಗಾವಿಯಲ್ಲಿ ಏನ್ ನಡೆಯುತ್ತಿದೆ. ಕಣ್ಣು ಮುಂದೆ ದೌರ್ಜನ್ಯ ನಡೆಯುತ್ತಿದೆ. ಕನ್ನಡ ಬಾವುಟಕ್ಕೆ ಬೆಂಕಿ ಇಡುತ್ತಿದ್ದಾರೆ. ಉದ್ಧವ್‌ ಠಾಕ್ರೆ ಬಾಲ ಬಿಚ್ಚಬಾರದು. ಹುಚ್ಚು ಹುಚ್ಚಾಗಿ ಮಾತಾನಾಡಬಾರದು. ನಮ್ಮ ಬಾವುಟಕ್ಕೆ ಬೆಂಕಿ ಹಾಕಿದ್ದಾರೆ ಎಂದು ಕಿಡಿಕಾರಿದರು.

ಶಾಸನ ಸಭೆಯಲ್ಲಿ ಸಭೆ ಮಾಡೋದು ಯಾಕೆ? ನಿಮಗೆ ಮರ್ಯಾದೆ ಇಲ್ಲವಾ. ಒಬ್ಬೊಬ್ಬರು ಒಂದೊಂದೇ ಹೇಳಿಕೆ ನೀಡುತ್ತಿದ್ದಾರೆ. ಇಷ್ಟೆಲ್ಲ ಚರ್ಚೆ ಮಾಡಿ ಒಂದು ಪತ್ರ ಬರೆದಿರಿ. ಆ ಪತ್ರಕ್ಕೆ ಏನು ಬೆಲೆಯಿದೆ. ಗೃಹಸಚಿವರ ಕಸದ ತೊಟ್ಟಿ ಸೇರಿದೆ ಅಷ್ಟೇ. ಸಿಎಂ ಬೊಮ್ಮಾಯಿ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದೇವೆ. ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ

ಯತ್ನಾಳ್ ಅಂತೆ, ಇನ್ನೊಬ್ಬ ನಿರಾಣಿ ಅಂತೆ. ಮುಖ್ಯಮಂತ್ರಿ ಬದಲಾವಣೆಯಂತೆ. ಯತ್ನಾಳ್ ವಿಧಾನಸೌಧವನ್ನೇ ಮಾರುತ್ತಾನೆ. ಅವನೊಬ್ಬ ಹುಚ್ಚ, ಅವನನ್ನು ಆಸ್ಪತ್ರೆಗೆ ಸೇರಿಸಬೇಕು. ಇನ್ನೊಬ್ಬ ನಿರಾಣಿ, ಶುಗರ್ ಫ್ಯಾಕ್ಟರಿ ಮಾಡ್ತಾನೆ ಅಷ್ಟೆ ಎಂದು ಟೀಕಿಸಿದರು. ಸಭೆಯಲ್ಲಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಭಾಗಿಯಾಗಿದ್ದವು.

Share This Article
Leave a Comment

Leave a Reply

Your email address will not be published. Required fields are marked *