40 ವರ್ಷಗಳಲ್ಲಿ ಕನ್ನಡ ಭಾಷೆ ಬೆಳವಣಿಗೆಯಾಗಿರೋದು ಶೇ.3.75 ಮಾತ್ರ: ಬಿಳಿಮಲೆ

Public TV
2 Min Read

ಬೆಂಗಳೂರು: ರಾಷ್ಟ್ರೀಯ ಭಾಷಾ ನೀತಿ ರೂಪಿಸದಿದ್ದರೆ ಹಲವು ಮಾತೃ ಭಾಷೆಗಳಿಗೆ ದೊಡ್ಡ ಆಪತ್ತು ಎದುರಾಗಲಿದೆ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಪ್ರಜಾ ಪ್ರಕಾಶನ-ಬೆಂಗಳೂರು ವತಿಯಿಂದ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಪರ್ಲ್ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಆಯ್ದು ಭಾಗ-1 `ತುಳು-ಕೊಡವ ಭಾಷೆಗಳ ಅಳಿವು-ಉಳಿವು` ಕೃತಿ ಲೋಕಾರ್ಪಣೆ ಮಾಡಿ ಭಾನುವಾರ ಅವರು ಮಾತನಾಡಿದರು. ಇದನ್ನೂ ಓದಿ: ಕನ್ನಡಿಗರಿಗೆ ಧಕ್ಕೆ ತರುವಂತಹ ಸನ್ನಿವೇಶ ಬಂದರೆ ನಾವೆಲ್ಲ ಹೋರಾಟ ಮಾಡಬೇಕು: ಹೆಚ್.ಡಿ.ರೇವಣ್ಣ

ಒಂದು ಭಾಷೆ ಸತ್ತರೆ ಆ ಭಾಷೆಯ ಹಿಂದಿರುವ ಶ್ರೀಮಂತ ಸಂಸ್ಕೃತಿ ಕೂಡ ಹಾಳಾಗುತ್ತದೆ. ಕೇವಲ ಕೊಡವ ಭಾಷೆಯ ಕಥೆಯಷ್ಟೇ ಅಲ್ಲ. 1971ರಿಂದ 2011ರ ವರೆಗಿನ ಅಂಕಿ ಅಂಶಗಳನ್ನು ತೆಗೆದುಕೊಂಡಾಗ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.56ರಷ್ಟು ಏರಿಕೆ ಆಗಿದೆ. ತೆಲುಗು, ತಮಿಳು ಶೇ.9ರಷ್ಟು ಬೆಳವಣಿಗೆ ಆಗಿದೆ. ಆದರೆ ಕನ್ನಡ ಭಾಷೆ ಬೆಳವಣಿಗೆ ಇಡೀ ದೇಶದಲ್ಲಿರುವ ಭಾಷೆಗಳಿಗಿಂತ ಕಡಿಮೆ ಅಂದರೆ 3.75 ರಷ್ಟು ಮಾತ್ರ. ಈ ಅಂಕಿ ಅಂಶ ಅತ್ಯಂತ ಆಘಾತಕಾರಿಯಾದುದು. ಭಾರತ ಬಹುತ್ವದ ದೇಶ. ಇಲ್ಲಿ ಹಲವು ಭಾಷೆ, ಸಂಸ್ಕೃತಿಗಳ ಸಮ್ಮಿಲನವಿದೆ. ಸುಮಾರು 19,569 ಭಾಷೆಗಳು ಭಾರತದಲ್ಲಿದ್ದು, ಆ ಎಲ್ಲಾ ಭಾಷೆಗಳನ್ನು ನಾವೆಲ್ಲರೂ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದೆ. ಆ ಹಿನ್ನೆಲೆಯಲ್ಲಿ ಮಾತೃ ಭಾಷೆ ಉಳಿಸಿಕೊಳ್ಳಲು ರಾಷ್ಟ್ರೀಯ ಭಾಷಾ ನೀತಿ ಅಗತ್ಯವಾಗಿದೆ ಎಂದರು.

ಈ ಹಿಂದೆ 2003ರಲ್ಲಿ ತುಳು, ಕಾಶ್ಮೀರದ ಡೋಗ್ರಾ, ಬಿಹಾರ ಮೈಥಿಲಿ, ಸಂತಾಲಿ, ಬೋಡೋ ಭಾಷೆಗಳನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪಟ್ಟಿಯಲ್ಲಿದ್ದವು. ಆದರೆ ತುಳು ಭಾಷೆಯನ್ನು ಬಿಟ್ಟು ಉಳಿದೆಲ್ಲ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲಾಯಿತು. 2008ರಲ್ಲಿ ಈ ಸಂಖ್ಯೆ 3ಕ್ಕೆ ಏರಿತು. ಈಗ ತುಳು ಸೇರಿದಂತೆ ಸುಮಾರು 99 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ತುದಿಗಾಲಿನಲ್ಲಿವೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಂವಿಧಾನದ ಮೇಲೆ ಆಗುತ್ತಿರುವ ಆಕ್ರಮಣವನ್ನು ತಡೆಯದಿದ್ದರೆ ಮುಂದೆ ಅಪಾಯ ಕಾದಿದೆ. ಸಂವಿಧಾನದಲ್ಲಿ ಎಲ್ಲಾ ರೀತಿಯ ಆಶಯಗಳಿವೆ. ಬಹುಸಂಸ್ಕೃತಿ, ಬಹುತ್ವದ ರಾಷ್ಟ್ರದಲ್ಲಿ ಎಲ್ಲರಿಗೂ ಸಹ ಸಮಾಜ ಅವಕಾಶಗಳು, ಸಮಾನ ಹಕ್ಕು ಇದೆ ಎಂಬುದನ್ನು ಸಂವಿಧಾನದ ಮೂಲಕ ನಮ್ಮ ಹಿರಿಯರು ನೀಡಿದ್ದಾರೆ. 2014ರ ನಂತರ ಆಕ್ರಮಣ ನಡೆಯುತ್ತಿದೆ. ಸಂವಿಧಾನ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನ ಕಳಚಿಕೊಂಡು ಹೋಯಿತು ಎಂದರೆ ಎಲ್ಲವೂ ಹೋದಂತೆ. ಪಟೇಲರು, ಜಮೀನ್ದಾರರು, ಶಾನುಭೋಗರು ಇರುತ್ತಾರೆ. ನಾವೆಲ್ಲಾ ಕೂಲಿಕಾರರಾಗಿರುತ್ತೇವೆ. ಸಂವಿಧಾನ ನೀಡಿರುವುದು ಕಾಂಗ್ರೆಸ್ಸಿಗರು. ಹೀಗಾಗಿ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ. ಇದು ಆರ್‌ಎಸ್‌ಎಸ್‌ ಜವಾಬ್ದಾರಿಯಲ್ಲ. ಸಂವಿಧಾನವನ್ನು ಕಾಪಾಡದಿದ್ದರೆ ಮುಂದೆ ಅಪಾಯ ಕಾದಿದೆ’ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

KANNADA FLAG

ರಾಜ್ಯಸಭಾ ಸಂಸದ ಮತ್ತು ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, ಕನ್ನಡ ಸೇರಿದಂತೆ ಭಾರತದ ಇತರ ಭಾಷೆಯ ರೀತಿಯಲ್ಲೆ ಹಿಂದಿ ಒಂದು ಭಾಷೆಯಾಗಿದೆ. ಅದನ್ನು ಒಂದು ಭಾಷೆಯಾಗಿ ಕಲಿಯಲಿ ನಮ್ಮ ಅಭ್ಯಂತರವಿಲ್ಲ. ಆದರೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡಿದರೆ ಅದನ್ನು ಸಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಬಿ.ಟಿ.ಲಲಿತಾನಾಯಕ್, ಕೃತಿ ಸಂಪಾದಕ ಆರ್. ಜಯಕುಮಾರ್, ಕಾಂಗ್ರೆಸ್ ಮುಖಂಡ ಯು.ಬಿ. ವೆಂಕಟೇಶ್, ಎನ್.ವಿ.ನಾಚಪ್ಪ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *