ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ತೆರೆಕಂಡ ಕಾಫಿನಾಡ ಶೋಭಾಯಾತ್ರೆ

Public TV
3 Min Read

– 20 ಸಾವಿರಕ್ಕೂ ಅಧಿಕ ದತ್ತಭಕ್ತರು ಭಾಗಿ
– ಸೊಂಟಕ್ಕೆ ನಂದಿಧ್ವಜ ಕಟ್ಟಿಕೊಂಡು ಕುಣಿದ ಸಿ.ಟಿ.ರವಿ

ಚಿಕ್ಕಮಗಳೂರು: ದತ್ತಜಯಂತಿಯ ಎರಡನೇ ದಿನವಾದ ಶನಿವಾರ ನಗರದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆ 3,500 ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ತೆರೆಕಂಡಿದೆ. ಕಳೆದೊಂದು ದಶಕದಲ್ಲೇ ಶೋಭಾಯಾತ್ರೆಗೆ ಇಷ್ಟೊಂದು ಜನ ಯಾವ ವರ್ಷವೂ ಸೇರಿರಲಿಲ್ಲ. ನಗರದ ಎಂ.ಜಿ.ರಸ್ತೆಯಲ್ಲಿ ಜನಸಾಗರವೇ ಏರ್ಪಟ್ಟಿತ್ತು. ಸುಮಾರು 20 ಸಾವಿರಕ್ಕೂ ಅಧಿಕ ದತ್ತಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ವಯಸ್ಸಿನ ಅಂತರವೇ ಇಲ್ಲದೆ ಮೂರು ವರ್ಷದ ಮಗುವಿನಿಂದ 70 ವರ್ಷದ ಮುದುಕರೂ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಡ್ರಮ್ ಸೆಟ್, ಡಿಜೆ, ವೀರಗಾಸೆ ಬಡಿತಕ್ಕೆ ಮನಸ್ಸೋ ಇಚ್ಛೆ ಕುಪ್ಪಳಿಸಿದರು. ಆದರೆ, ದತ್ತಪೀಠ ನಮ್ಮದು ಅನ್ನೋದನ್ನ ಮಾತ್ರ ಯಾರೂ ಮರೆಯಲಿಲ್ಲ. ಮನಸ್ಸೋ ಇಚ್ಛೆ ಕುಡಿಯುತ್ತಲೇ ದತ್ತಪೀಠ ಹಿಂದೂಗಳ ಪೀಠವೆಂದು ಸಾರಿ…ಸಾರಿ ಹೇಳುತ್ತಿದ್ದರು.

ಸುಮಾರು 20 ಸಾವಿರಕ್ಕೂ ಅಧಿಕ ದತ್ತಭಕ್ತರು ಪಾಲ್ಗೊಂಡಿದ್ದು ಸುಮಾರು ಒಂದೂವರೆ ಕಿ.ಮೀ. ಉದ್ದದ ಎಂ.ಜಿ.ರಸ್ತೆ ಸಂಪೂರ್ಣ ತುಂಬಿ ಹೋಗಿತ್ತು. ಸಾವಿರಾರು ಜನ ಕೈಯಲ್ಲಿ ಕೇಸರಿ ಬಾವುಟ ಹಿಡಿದು ದತ್ತಪೀಠ ನಮ್ಮದೆಂದು ಘೋಷವಾಕ್ಯ ಕೂಗಿದರು. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಸೇರಿದ್ದ ಜನಸಾಗರವನ್ನ ಪೊಲೀಸ್ ಇಲಾಖೆ ಕೂಡ ಅಷ್ಟೆ ನೀಟಾಗಿ ಬಂದೋಬಸ್ತ್ ಕಲ್ಪಿಸಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಹೆಜ್ಜೆಗೊಬ್ಬರಂತೆ ಮೆರವಣಿಗೆಯುದ್ಧಕ್ಕೂ ಸುಮಾರು 3500 ಸಾವಿರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕೂಡ ಫೈರಿಂಜಿನ್ ವಾಹನ ಮೇಲೆ ನಿಂತು ಬಂದೋಬಸ್ತ್ ಬಗ್ಗೆ ಮುತುವರ್ಜಿ ವಹಿಸಿದ್ದರು. ರಾಜ್ಯದ 13 ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಪೊಲೀಸರು ತಮ್ಮ ಸೂಚಿಸಿದ್ದ ಪಾಯಿಂಟ್‍ಗಳಲ್ಲಿ ನಿಂತು ಒಂಚೂರು ತೊಂದರೆಯಾಗದಂತೆ ತಮ್ಮ ಕಾರ್ಯ ನಿರ್ವಹಿಸಿದ್ದರಿಂದ 4-5 ಗಂಟೆ ನಿರಂತರವಾಗಿ ಕುಣಿದ ಯುವಜನತೆಯನ್ನ ಶಾಂತಿಯುತವಾಗಿ ನಿರ್ವಹಿಸಿ ಮುಂದುವರಿಸಿದರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

ಇಂದಿನ ಶೋಭಾಯಾತ್ರೆಯ 20 ಸಾವಿರಕ್ಕೂ ಅಧಿಕ ದತ್ತಭಕ್ತರಲ್ಲಿ ಅಂದಾಜು ಐದು ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳೇ ಇದ್ದರು. ಅವರು ಡಿಜೆ ಬಿಟ್ಟು ಆಕಡೆ-ಈಕಡೆ ಹೋಗಲಿಲ್ಲ. ಡಿಜೆ ಮ್ಯೂಸಿಕ್‍ನ ಭಜರಂಗಿ ಹಾಗೂ ರಾಮನ ಹಾಡಿಗೆ ಕೈಯಲ್ಲಿ ಕೇಸರಿ ಬಾವುಟ ಹಿಡಿದು ಮೈಮರೆತು ಕುಣಿದರು. ನಗರದ ಐಜಿ ರಸ್ತೆಯ ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾದ ಯಾತ್ರೆ ಸುಮಾರು ಎರಡೂವರೆ ಕಿ.ಮೀ. ಸಾಗಲು ಸುಮಾರು ಆರು ಗಂಟೆ ಟೈ ತೆಗೆದುಕೊಂಡಿತ್ತು. ಗಣಪತಿ ದೇವಸ್ಥಾನದಿಂದ ಹನುಮಂತಪ್ಪ ವೃತ್ತದ ಬಳಿ ಬರುವಷ್ಟರಲ್ಲಿ ಇಡೀ ಚಿಕ್ಕಮಗಳೂರೇ ಹನುಮಂತಪ್ಪ ವೃತ್ತದಲ್ಲಿ ಮೈಮರೆತು ಕುಣಿಯುತ್ತಿತ್ತು. ಶಾಲಾ ಮಕ್ಕಳು ಶಾಲೆಗೆ ಹೋಗದೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹೆಣ್ಣು ಮಕ್ಕಳು ಪ್ಯಾಂಟ್-ಶರ್ಟ್ ಧರಿಸಿ ಕೊರಳಿಗೆ ಕೇಸರಿ ವಸ್ತ್ರ ಸುತ್ತಿಕೊಂಡು ಡಿಜೆ, ಡ್ರಮ್ ಸೆಟ್ ಶಬ್ಧಕ್ಕೆ ಸೆಡ್ಡು ಹೊಡೆದು ಕುಣಿದರು.

ಶಾಸಕ ಸಿ.ಟಿ.ರವಿ ಶೋಭಾಯಾತ್ರೆಗೆ ಚಾಲನೆ ನೀಡುತ್ತಿದ್ದಂತೆ ಹೆಣ್ಣುಮಕ್ಕಳು ಸಿ.ಟಿ.ರವಿಯನ್ನ ಸುತ್ತುವರಿದು ತಮ್ಮೊಂದಿಗೆ ಕುಣಿಯುವಂತೆ ಹೇಳಿದರು. ಶಾಸಕ ಸಿ.ಟಿ.ರವಿ ಕೂಡ ಹೆಣ್ಣು ಮಕ್ಕಳ ಜೊತೆ ಕುಣಿದು ಸಂಭ್ರಮಿಸಿದರು. ಬಳಿಕ ಸೊಂಟಕ್ಕೆ ನಂದಿಧ್ವಜವನ್ನ ಕಟ್ಟಿಕೊಂಡು ಕುಣಿದು ನೆರೆದಿದ್ದವರನ್ನ ರಂಜಿಸಿದರು. ಇಂದು ಕೂಲ್ ಸಿಟಿ ಕಾಫಿನಾಡು ಅಕ್ಷರಶಃ ಕೆಸರಿ ಕಲರವದಲ್ಲಿ ಕಣ್ಮರೆಯಾಗಿತ್ತು. ಐ.ಜಿ.ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್, ಹನುಮಂತಪ್ಪ ವೃತ್ತ ಎಲ್ಲಿ ನೋಡಿದರೂ ಜನವೋ ಜನ. ಸುಮ್ಮನೆ ನಿಂತೋರಿಗಿಂತ ನಿಂತಲ್ಲೇ ಕುಣಿದು ಕುಪ್ಪಳಿಸಿದವೇ ಹೆಚ್ಚು. ವೀರಭದ್ರ ವೇಷಧಾರಿಗಳ ಜೊತೆ ವೀರಗಾಸೆ ಕತ್ತಿ ಹಿಡಿದು ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು. 20 ಸಾವಿರಕ್ಕೂ ಅಧಿಕ ಜನರಿದ್ದರೂ ಒಂದೇ ಒಂದು ಸಣ್ಣ ಕಿರಿಕ್ ಕೂಡ ಆಗದೆ ಅತ್ಯಂತ ಶಾಂತಿಯುತವಾಗಿ ಶೋಭಾಯಾತ್ರೆ ತೆರೆ ಕಂಡಿತು.

ಯುವಜನತೆ ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಕುಣಿದರೂ ಯುವಕ-ಯುವತಿಯರ ಉತ್ಸಾಹ, ಹುಮ್ಮಸ್ಸು ಮಾತ್ರ ಮಾತ್ರ ಕಡಿಮೆಯಾಗಲಿಲ್ಲ. ಒಂದೊಂದು ಶಬ್ಧಕ್ಕೂ ಮತ್ತೆ ಚಾರ್ಜ್ ಆಗಿ ಕುಣಿಯುತ್ತಿದ್ದರು. ಇನ್ನು ಯಾತ್ರೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನ ಮೆರವಣಿಗೆ ಮಾಡಿದರು. ಶೋಭಾಯಾತ್ರೆಯ ಉದ್ದಗಲಕ್ಕೂ ಕೇಸರಿಯ ಬಾವುಟಗಳು ರಾರಾಜಿಸುತ್ತಿದ್ದವು. ಶೋಭಾಯಾತ್ರೆ ಸಾಗಿ ಹೋಗುವ ಮಾರ್ಗದುದ್ದಕ್ಕೂ ಬಿಗಿ ‌ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ಸಾಗುವ ವೇಳೆ ಬಿಲ್ಡಿಂಗ್‍ಗಳ ಮೇಲೆ ಸಾವಿರಾರು ಮಹಿಳೆಯರು ನಿಂತು ಶೋಭಾಯಾತ್ರೆಯನ್ನ ಕಣ್ತುಂಬಿಕೊಂಡು. ಯಾತ್ರೆಗೆ ಬಂದಿದ್ದ ಸಾವಿರಾರು ಜನ ಕೂಡ ಅಷ್ಟೆ ಶಾಂತಿಯುತವಾಗಿ ವರ್ತಿಸಿದ್ದರಿಂದ ಒಂದೇ ಒಂದು ಸಣ್ಣ ಜಗಳ, ಕಿರಿಕ್ ಇಲ್ಲದಂತೆ ನೋಡನೋಡ್ತಿದ್ದಂತೆ ಮುಗಿದದ್ದೇ ತಿಳಿಯದಂತೆ ಯಾತ್ರೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದರಲ್ಲಿ ಪೊಲೀಸರು ಹಾಗೂ ಸಂಘಟಕರ ಪಾತ್ರ ದೊಡ್ಡದು.

Share This Article
Leave a Comment

Leave a Reply

Your email address will not be published. Required fields are marked *