ಮಕ್ಕಳಿಗೂ ವಕ್ಕರಿಸಿತು ಹೊಸ ತಳಿ- ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಓಮಿಕ್ರಾನ್‌ ಪತ್ತೆ

Public TV
1 Min Read

ನವದೆಹಲಿ: ವಯಸ್ಕರನ್ನು ಕಾಡುತ್ತಿದ್ದ ಓಮಿಕ್ರಾನ್‌ ಈಗ ಮಕ್ಕಳಿಗೂ ವಕ್ಕರಿಸಿದೆ. ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 3 ವರ್ಷದ ಮಗು ಸೇರಿದಂತೆ 7 ಮಂದಿಯಲ್ಲಿ ಓಮಿಕ್ರಾನ್‌ ಪತ್ತೆಯಾಗಿದೆ. ಇದರಿಂದ ದೇಶದಲ್ಲಿ ಓಮಿಕ್ರಾನ್‌ ಸೋಂಕು ಒಟ್ಟು ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: 2 ಡೋಸ್ ಲಸಿಕೆ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಲು ICMR ಅನುಮತಿ?

ಸೋಂಕಿತ 7 ಮಂದಿ ಪೈಕಿ ಮೂವರು ಮುಂಬೈನವರಾಗಿದ್ದಾರೆ. ಇವರು ತಾಂಜೇನಿಯಾ, ಯುಕೆ, ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸಿದ್ದರು. ಇದರಿಂದಾಗಿ ಮುಂಬೈನಲ್ಲಿ ಈಗ ಒಟ್ಟು 5 ಓಮಿಕ್ರಾನ್‌ ಪ್ರಕರಣಗಳಿವೆ. ಒಟ್ಟು ಸೋಂಕಿತರ ಪೈಕಿ ನಾಲ್ವರಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಮೂವರಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿದ್ದವು.

ಪುಣೆಯ ನಾಲ್ವರು ಓಮಿಕ್ರಾನ್‌ ಸೋಂಕಿತರು ನೈಜೀರಿಯಾ ಮಹಿಳೆಯ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರಲ್ಲೂ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸೋಂಕಿತರಲ್ಲಿ ನಾಲ್ವರು ಕೋವಿಡ್‌ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದರು. ಇನ್ನು ಮೂವರು ಒಂದು ಡೋಸ್‌ ಮಾತ್ರ ಪಡೆದಿದ್ದರು. ಇದನ್ನೂ ಓದಿ: ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ಪಡೆದವರಲ್ಲೂ ಓಮಿಕ್ರಾನ್‌ ಪತ್ತೆ!

ವಿಶ್ವದಲ್ಲಿ ನವೆಂಬರ್‌ 24ರ ಸಂದರ್ಭದಲ್ಲಿ ಕೇವಲ ಎರಡು ದೇಶಗಳಲ್ಲಿ ಮಾತ್ರ ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಆ ಸಂಖ್ಯೆ 59 ದೇಶಗಳಿಗೆ ವಿಸ್ತರಿಸಿದೆ. ಇಷ್ಟೂ ದೇಶಗಳಲ್ಲಿ ಈವರೆಗೆ ಓಮಿಕ್ರಾನ್‌ ಸೋಂಕಿತ ಒಟ್ಟು 2,936 ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *