ಚಿಕ್ಕಮಗಳೂರು: ಎಗ್ ರೈಸ್ ತಿಂದ ಬಳಿಕ ತಿಂದ ಅನ್ನದ ದುಡ್ಡನ್ನು ಕೇಳಿದ್ದಕ್ಕೆ ಮೂವರು ನಡು ರಸ್ತೆಯಲ್ಲಿ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅಕ್ಕಪಕ್ಕದವರೊಂದಿಗೆ ಮಾರಾಮಾರಿ ನಡೆಸಿರುವ ಘಟನೆ ನಗರದ ಹೃದಯಭಾಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ.
ಹಲ್ಲೆ ನಡೆಸಿದ ಯುವಕರನ್ನು ತಾಲೂಕಿನ ಸಗನೀಪುರದ ಯುವಕರು ಎಂದು ಹೇಳಲಾಗಿದೆ. ತಿಂದ ಅನ್ನದ ದುಡ್ಡು ಕೇಳಿದ್ದಕ್ಕೆ ಫೈಬರ್ ಚೇರ್, ಮರದ ರೀಪರ್, ಎಗ್ ರೈಸ್ ಮಾಡುವ ಬಾಂಡ್ಲಿ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳಿಂದ ಹಲ್ಲೆ ಮಾಡಿದ ಯುವಕರು ಮದ್ಯ ಸೇವಿಸುವುದರ ಜೊತೆ ಗಾಂಜಾ ಕೂಡ ಹೊಡೆದಿದ್ದರು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಹಲ್ಲೆ ಮಾಡಿದ ಮೂವರು ಯುವಕರು ಯಾವಾಗಲು ಇಲ್ಲಿಗೆ ಬರುವವರು. ಗಾಂಜಾ ಮತ್ತಿನ ಗಮ್ಮತ್ತಿನಲ್ಲಿದ್ದ ಯುವಕರಿಗೆ ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಪರಿವೇ ಇರಲಿಲ್ಲ. ಗಾಂಜಾ ಜೊತೆ ಎಣ್ಣೆ ಮಿಕ್ಸ್ ಆಗಿ ನಾವು ಮನುಷ್ಯರು ಎಂಬುದನ್ನೇ ಮರೆತು ವರ್ತಿಸಿದ್ದರು. ಸುತ್ತಮುತ್ತ ನೂರಾರು ಜನರಿದ್ದರೂ ಕೈಗೆ ಸಿಕ್ಕಿದ್ದರಲ್ಲಿ ಹಲ್ಲೆ ಮಾಡುತ್ತಿದ್ದ ಈ ಮೂವರು ಯುವಕರ ಬಳಿ ಹೋಗುವ ಧೈರ್ಯವನ್ನು ಯಾರೂ ಮಾಡಲಿಲ್ಲ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಮಹಿಳೆಯರಿಬ್ಬರು ಇವರ ಅಬ್ಬರ ನೋಡಿ ಓಡಿ ಹೋಗಿದ್ದರು. ಪೊಲೀಸರು ಬರುವಷ್ಟರಲ್ಲಿ ಎಲ್ಲರೂ ರಂಪಾ ಮಾಡಿ ಹೋಗಿದ್ದರು. ಆದರೆ, ಅಂದೇ ದುಡಿದು ಅಂದೇ ತಿನ್ನುವ ಎಗ್ ರೈಸ್ ಅಂಗಡಿ ಯುವಕನಿಗೆ ಸಾವಿರಾರು ರೂಪಾಯಿ ನಷ್ಟ ಮಾಡಿದ್ದಾರೆ. ನಗರದಲ್ಲಿ ಇದೊಂದೆ ಅಲ್ಲ. ಕಳೆದ ಎರಡ್ಮೂರು ದಿನಗಳ ಹಿಂದೆ ಇಂತದ್ದೇ ಇನ್ನೊಂದು ಪ್ರಕರಣ ನಡೆದಿದೆ. ನಗರದ ಮಲ್ಲಂದೂರು ರಸ್ತೆಯ ಟಾಟಾ ಮೋಟಾರ್ಸ್ ಬಳಿ ಮದ್ಯ ಸೇವಿಸಿದ್ದ ಏಳು ಜನ ಯುವಕರು ಮದ್ಯದ ನಶೆಯಲ್ಲಿ ರಸ್ತೆಯಲ್ಲಿ ನಿಂತಿದ್ದ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಮೂವರಿಗೆ ಮೂಗು-ಬಾಯಿಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಹಾಗಾಗಿ, ಸ್ಥಳಿಯರು ನಗರದಲ್ಲಿ ದಿನದಿಂದ ದಿನಕ್ಕೆ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಎಣ್ಣೆ ಹೊಡೆದು ರಸ್ತೆಯಲ್ಲಿ ಹೊಡೆದಾಡುವ ರೋಡ್ ರೋಮಿಯೋಗಳಿಗೆ ಪೊಲೀಸ್ ಭಾಷೆಯಲ್ಲಿ ಬುದ್ಧಿ ಹೇಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!