ಏಷ್ಯಾದ ದೊಡ್ಡ ವಿಮಾನ ನಿಲ್ದಾಣಕ್ಕೆ ಮೋದಿಯಿಂದ ಭೂಮಿ ಪೂಜೆ – ವಿಶೇಷತೆ ಏನು?

Public TV
3 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಐತಿಹಾಸಿಕ ಯೋಜನೆಗೆ ಇಂದು ಅಡಿಗಲ್ಲು ಹಾಕಿದ್ದು, ಆ ಮೂಲಕ 2024 ರ ವೇಳೆಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.

ನೊಯ್ಡಾದ ಜೇವಾರ್ ಬಳಿ ನಿರ್ಮಾಣವಾಗಲಿರುವ ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗೆ ಪ್ರಧಾನಿ ಮೋದಿ ಇಂದು ಭೂಮಿ ಪೂಜೆ ಮಾಡಿದ್ದು ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಲಿದೆ ಎಂದು ವರದಿಗಳು ಹೇಳಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ‌ ಮಾಡಿಕೊಂಡು ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ. ಮುಂಬರುವ ಉತ್ತರ ಪ್ರದೇಶ ಚುನಾವಣೆ ಮತ್ತು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಗೆ ಈಗ ಚಾಲನೆ ನೀಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

ಮಾಹಿಗಳ ಪ್ರಕಾರ, ವರ್ಷಕ್ಕೆ 7 ಕೋಟಿ ಪ್ರಯಾಣಿಕರ ಸಾಮರ್ಥ್ಯ ಈ ಬೃಹತ್ ವಿಮಾನ ನಿಲ್ದಾಣ ಹೊಂದಿರಲಿದ್ದು, ಏಕಕಾಲದಲ್ಲಿ 186 ವಿಮಾನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ 10 ಲಕ್ಷ ಟನ್ ಕಾರ್ಗೋ ಟರ್ಮಿನಲ್‌ಗೆ ವ್ಯವಸ್ಥೆ ಮಾಡಲಾಗಿದ್ದು,  ದೆಹಲಿಯಿಂದ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ, ವಾರಣಾಸಿಯಿಂದ ಹೈಸ್ಪೀಡ್ ರೈಲಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.  ಇದು 30,000 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದು 2024 ರ ವೇಳೆಗೆ ಮೊದಲ ಹಂತದಲ್ಲಿ ಜನರ ಬಳಕೆಗೆ ಮುಕ್ತಾಯಗೊಳಿಸಲು ಯೋಜನೆ ರೂಪಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಹೈಟೆಕ್ ಹೋಟೆಲ್, ವಿವಿಐಪಿ ಟರ್ಮಿನಲ್, ತೆರೆದ ಪ್ರವೇಶ ಇಂಧನ ಫಾರ್ಮ್, ವಿಮಾನ ನಿಲ್ದಾಣದ  ಅಗ್ನಿಶಾಮಕ ಕಟ್ಟಡ, ದೊಡ್ಡ ಮಳೆ ಕೊಯ್ಲು ಕೊಳವನ್ನು ಸಹ ನಿರ್ಮಿಸಲು ಯೋಜಿಸಲಾಗಿದೆ. ಅಲ್ಲದೇ ನಿಲ್ದಾಣದ ಸಂಕೀರ್ಣದಲ್ಲಿ 167 ಎಕರೆ ಪ್ರದೇಶವನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ನಾವು ರಾಜೀಯಾಗುವುದಿಲ್ಲ: ಅಮೀರ್‌ಗೆ ರಾಕಿಬಾಯಿ ಯಶ್ ಉತ್ತರ

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಮುನಾ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಪ್ರೈವೇಟ್ ಲಿಮಿಟೆಡ್ (YIAPL) ಅಭಿವೃದ್ಧಿಪಡಿಸುತ್ತಿದೆ. ಇದು ಜ್ಯೂರಿಚ್ ಏರ್ಪೋರ್ಟ್ ಇಂಟರ್‌ನ್ಯಾಷನಲ್‌ನ ಅಂಗಸಂಸ್ಥೆಯಾಗಿದೆ. ಉತ್ತರ ಪ್ರದೇಶ ಸರ್ಕಾರವು ಅಕ್ಟೋಬರ್ 7, 2020 ರಂದು YIAPL ನೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದೆ.

ನಾಲ್ಕು ಹಂತಗಳಲ್ಲಿ ಈ ಯೋಜನೆ ಪೂರ್ಣವಾಗಲಿದ್ದು 2024 ರ ವೇಳೆಗೆ ಮೊದಲ ಹಂತ ಪೂರ್ಣಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಈ ವಿಮಾನ ನಿಲ್ದಾಣದಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಹೊಂದಲಾಗಿದೆ.

3,500 ಎಕರೆ ವಿಸ್ತೀರ್ಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ವಿಮಾನ ನಿಲ್ದಾಣಕ್ಕೆ ಮುಖ್ಯ ಪ್ರವೇಶದ ಉದ್ದಕ್ಕೂ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ 167 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಸದ್ಯ ಇರುವ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 72 ಕಿ.ಮೀ. ದೂರದಲ್ಲಿ ನೊಯ್ಡಾ ವಿಮಾನ ನಿಲ್ದಾಣವಿದ್ದು, ನೋಯ್ಡಾ, ಫರಿದಾಬಾದ್ ಮತ್ತು ಗಾಜಿಯಾಬಾದ್‌ನಿಂದ 40 ಕಿ.ಮೀ. ದೂರದಲ್ಲಿದೆ.

ಈ ನಿಲ್ದಾಣದಿಂದಾಗಿ ಉತ್ತರಪ್ರದೇಶವು ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ವಿಮಾನ ನಿಲ್ದಾಣ ದೆಹಲಿ ಎನ್‍ಸಿಆರ್‌ ವ್ಯಾಪ್ತಿಯಲ್ಲಿ ಬರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ದೆಹಲಿ, ನೋಯ್ಡಾ, ಗಾಜಿಯಾಬಾದ್, ಅಲಿಗಢ್, ಆಗ್ರಾ, ಫರಿದಾಬಾದ್ ಮತ್ತು ಹತ್ತಿರದ ಪ್ರದೇಶದ ಜನರಿಗೆ ಈ ನಿಲ್ದಾಣದಿಂದ ಲಾಭವಾಗಲಿದೆ. ಈ ನಿಲ್ದಾಣ ಉತ್ತರ ಭಾರತದ ಲಾಜಿಸ್ಟಿಕ್ಸ್ ಗೇಟ್‍ವೇ ಆಗಲಿದೆ ಎಂದು ವಿಶ್ಲೇಷಿಸಿದ್ದು ಉತ್ತರ ಪ್ರದೇಶಕ್ಕೆ ಭಾರೀ ನೆರವಾಗಬಹುದು ಎಂದು ಅಂದಾಜಿಸಲಾಗಿದೆ.

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಾಲ್ಕು ಹಂತಗಳಲ್ಲಿ ನಿರ್ಮಾಣವಾಗಲಿದೆ. ಮೊದಲ ಹಂತದ ಕಾಮಗಾರಿಯನ್ನು 36 ತಿಂಗಳುಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮೊದಲ ಹಂತ ಮುಕ್ತಾಯವಾದ ಬಳಿಕ ವರ್ಷಕ್ಕೆ 1.2 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಇದು ಹೊಂದಲಿದ್ದು, 2040-50ರ ನಡುವೆ ಎಲ್ಲ ಕಾಮಗಾರಿ ಪೂರ್ಣಗೊಂಡ ಬಳಿಕ ವರ್ಷಕ್ಕೆ ಜೇವಾರ್ ವಿಮಾನ ನಿಲ್ದಾಣ 7 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ವಿಮಾನಯಾನ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *