ಬೆಂಗಳೂರು: ಸ್ಯಾಂಡಲ್ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅಪ್ಪು ನಟನೆಯ `ರಾಜಕುಮಾರ’ ಚಿತ್ರವನ್ನು ಇಂದು ಮರು ಬಿಡುಗಡೆಯಾಗಿದೆ.
ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರು ಅಭಿನಯಿಸಿರುವ ಸಾಕಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರ ಜೊತೆಗೆ ಯಶಸ್ವಿ ಪ್ರದರ್ಶನ ಕಂಡಿದೆ. ಪುನೀತ್ ನಟಿಸಿದ್ದ ಹಲವಾರು ಹಿಟ್ ಸಿನಿಮಾಗಳಲ್ಲಿ ಪ್ರೇಕ್ಷಕರ ಮನಮುಟ್ಟಿದ ಸಿನಿಮಾಗಳಲ್ಲಿ ರಾಜಕುಮಾರ ಚಿತ್ರ ಕೂಡ ಒಂದಾಗಿದೆ. ಸದ್ಯ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಬೆಂಗಳೂರಿನ ಶ್ರೀನಿವಾಸ ಥಿಯೇಟರ್ನಲ್ಲಿ ರಾಜಕುಮಾರ ಸಿನಿಮಾ ಮರು ಬಿಡುಗಡೆಯಾಗಿದೆ.
`ರಾಜಕುಮಾರ’ ಚಿತ್ರವನ್ನು ಅಭಿಮಾನಿ ದೇವರುಗಳಿಗಾಗಿ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಸಿನಿಮಾ ವೀಕ್ಷಿಸಲು ಥಿಯೇಟರ್ಗೆ ಬಂದ ಅಭಿಮಾನಿಗಳು ಥಿಯೇಟರ್ ಬಳಿ ಇದ್ದ ಪುನೀತ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಚಿತ್ರ ಆರಂಭಕ್ಕೂ ಮುನ್ನ 2 ನಿಮಿಷ ಮೌನಾಚರಣೆ ಮಾಡಿದ್ದಾರೆ. ಇದೇ ವೇಳೆ ಅವನಿಲ್ಲ, ಮತ್ತೆ ಬರಲ್ಲ, ಇದೇ ಲಾಸ್ಟ್ ಶೋ, ಇದೇ ನಮ್ಮ ಕೊನೆ ಸಿನಿಮಾ, ಇನ್ನು ಸಿನಿಮಾ ನೋಡಲ್ಲ ಎಂದು ಅಪ್ಪು ನೆನೆದು ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
ನಟ ಪವರ್ ಸ್ಟಾರ್ ಪುನೀತ್ರಾಜ್ ಕುಮಾರ್ ಶುಕ್ರವಾರ ಹೃದಯ ಕಂಪನದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸದ್ಯ ಪುನೀತ್ ರಾಜ್ಕುಮಾರ್ ಅವರ ಸಮಾಧಿ ನೋಡಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಆದರೆ ಸದ್ಯ 2 ದಿನಗಳ ಕಾಲ ಸಾರ್ವಜನಿಕರಿಗೆ ಸಮಾಧಿ ಬಳಿ ಪ್ರವೇಶವನ್ನು ನಿಷೇಧಿಸಲಾಗಿದೆ. ಮಂಗಳವಾರ ಹಾಲು-ತುಪ್ಪ ಕಾರ್ಯದ ಬಳಿಕ ಸಾರ್ವಜನಿಕರು ಪುನೀತ್ ಸಮಾಧಿ ವೀಕ್ಷಿಸಲು ಅವಕಾಶ ಕಲ್ಪಿಸಿ ಕೊಡುವ ಸಾಧ್ಯತೆಯಿದೆ. ಇದನ್ನೂ ಓದಿ: ನಾಳೆ ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯ – ಕಂಠೀರವ ಸ್ಟುಡಿಯೋ ಬಳಿ ಪೊಲೀಸರ ಸರ್ಪಗಾವಲು

 
			

 
		 
		
 
                                
                              
		