ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ: ಸಿದ್ದುಗೆ ಟಾಂಗ್ ಕೊಟ್ಟ ಸಿಎಂ

Public TV
3 Min Read

– ಎಳನೀರಿನಷ್ಟೇ ಸಿಹಿ ಸಿಂದಗಿ ಜನ

ವಿಜಯಪುರ: ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಮೊರಟಿಗಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಯಾ ಟೀಮ್‍ಗೆ ಶುಭ ಕೋರಿದ್ದು, ಇಂಡಿಯಾ ಗೆದ್ದು ಬರಲೆಂದು ಹಾರೈಸಿದ್ದಾರೆ. ಈ ವೇಳೆ ಕುರಿ ಕಾದಿದ್ದಿದಿಯಾ, ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಕುರಿ ಕಾದಿದ್ದಿದಿಯಾ, ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ. 2008ರಲ್ಲಿ ಕುರಿ ಕಾದಿದ್ದೇನೆ. ಸಿದ್ದರಾಮಯ್ಯ ಅವರು ಯಾವತ್ತಾದ್ರೂ ಕಾದಿದ್ದಾರಾ? ಆ ಕಂಬಳಿಯ ಯೋಗ್ಯತೆ ನನಗೆ ಗೊತ್ತಿದೆ. ಆ ಕುರಿಗಾರ ಬಿಸಿಲು, ಮಳೆ ಎನ್ನದೆ ಕಾದು, ಉಣ್ಣೆಯನ್ನು ಉತ್ಪಾದನೆ ಮಾಡಿದ್ದೇವೆ. ಅದರ ನೂಲನ್ನ ತಗೆದು, ನೇಯ್ದು ಕಂಬಳಿ ಮಾಡಿರ್ತಾನೆ. ಅದರ ಶ್ರಮ ಗುರುತ್ತಿಟ್ಟುಕೊಂಡು ನಾನು ಮಾಡ್ತಾ ಇದ್ದೇನೆ. ಈ ಕಂಬಳಿಯ ಗೌರವವನ್ನು ಉಳಿಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.

ಎಳನೀರು ಎಷ್ಟು ಸಿಹಿ ಆಗಿದೆ. ಸಿಂದಗಿ ಜನ ಅಷ್ಟೇ ಸಿಹಿ ಆಗಿ ವಿಶ್ವಾಸವನ್ನ ತೋರಿಸಿದ್ದಾರೆ. ಅಭೂತ ಪೂರ್ವವಾದ ಬೆಂಬಲವನ್ನ ಕೊಟ್ಟಿದ್ದಾರೆ. ನಮ್ಮ ಜಯ ನಿಶ್ಚಿತ. ಜನರು ನಮಗೆ ನಿರಾವರಿ ಆಗಬೇಕು, ರಸ್ತೆಗಳು ಆಗಬೇಕು, ವಿದ್ಯುತ್ ಶಕ್ತಿ ಸಮಸ್ಯೆ ಬಗೆ ಹರಿಸಬೇಕು ಎಂದು ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಇವೆಲ್ಲವನ್ನು ಮಾಡಲು ಸಾಧ್ಯವಿದೆ. ಅವನ್ನೆಲ್ಲವನ್ನು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಗಳನ್ನ ಕೊಟ್ಟಿದ್ದು ನಾವು!

ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಲಸಿಕೆ ಉಚಿತವಾಗಿ ಕೊಟ್ಟವರು. ಕೋವಿಡ್-19 ಅನ್ನು ಯಶಸ್ವಿಯಾಗಿ ಮಾಜಿ ಸಿಎಂ ಯಡಿಯೂರಪ್ಪ, ನರೇಂದ್ರ ಮೋದಿ ಎದುರಿಸಿದ್ದಾರೆ. ಬಡವರ ಪರ ಇರೋ ಸರ್ಕಾರ ನಮ್ಮದು. ಯಡಿಯೂರಪ್ಪ ಅವರು ಮಕ್ಕಳಿಗೆ ಸೈಕಲ್ ಕೊಟ್ಟರು. ಸಿದ್ದರಾಮಯ್ಯ ಅವರು ಏನು ಕೊಟ್ಟರು? ಎಂದು ಪ್ರಶ್ನಿಸಿದ್ದಾರೆ. ಹಾಲು ಉತ್ಪಾದಕರಿಗೆ ಸಹಾಯ ಧನ ಕೊಟ್ಟರು. ಭಾಗ್ಯಲಕ್ಷ್ಮಿ, ವೃದ್ಧಾಪ್ಯ ವೇತನ ಯಡಿಯೂರಪ್ಪ ಅವರು ಕೊಟ್ಟರು. ಗರೀಬ್ ಕಲ್ಯಾಣ ಯೋಜನೆ ಮೋದಿ ಅವರು ತಂದಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಮೋದಿ ಅವರು ತಂದಿದ್ದಾರೆ. ಅಮೃತ್ ಯೋಜನೆಯಲ್ಲಿ ಗ್ರಾಮಗಳ ಅಭಿವೃದ್ಧಿ ಮಾಡ್ತಿದ್ದೇವೆ ಎಂದು ಹೇಳಿದರು.

ಸಿಂದಗಿಗೆ ಒಂದು ವರ್ಷದಲ್ಲಿ 7 ಸಾವಿರ ಮನೆ ಕಟ್ಟಿಸಿಕೊಡುತ್ತೇವೆ. ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸುತ್ತೇವೆ. ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ, ಏನು ಯೋಜನೆ ಕೊಟ್ಟಿಲ್ಲ. ಯಾವುದೇ ನೀರಾವರಿ ಯೋಜನೆಯನ್ನು ಅವರು ಮುಕ್ತಾಯ ಮಾಡಿಲ್ಲ. ಈ ತಾಲೂಕಿನ ಬಗ್ಗೆ ಸಿದ್ದರಾಮಯ್ಯ ಅವರು ತಿರುಗಿ ನೋಡಿಲ್ಲ. ಈಗ ಅನುಕಂಪದ ಮಾತು ಆಡ್ತಿದ್ದಾರೆ. ಸಿಂದಗಿಯಲ್ಲಿ 1 ಲಕ್ಷ ಹೆಕ್ಟೇರ್ ನೀರಾವರಿ ಯೋಜನೆ ಮಾಡ್ತೀವಿ ಎಂದು ತಿಳಿಸಿದರು.

ಗೋಣಿ ಚೀಲದ ಆರೋಪ!

ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋಣಿ ಚೀಲದ ಆರೋಪ ಮಾಡ್ತಾರೆ. ಗೋಣಿ ಚೀಲ ಇರೋದು ಡಿ.ಕೆ.ಶಿವಕುಮಾರ್ ಅವರ ಬಳಿ. ಈಗ ಡಿಕೆ ಸುರೇಶ್ ಬಂದಿದ್ದಾರೆ ಅಂತೆ. ಹುಷಾರು ಎಲ್ಲೆಲ್ಲಿ ಗೋಣಿ ಚೀಲ ಇಡ್ತಾರೋ. ಕತ್ತಲ ರಾತ್ರಿ ಮಾಡೋ ಸಂಸ್ಕೃತಿ ಕಾಂಗ್ರೆಸ್‍ದು, ಡಿಕೆಶಿ ಅವರದ್ದು ಗೋಣಿ ಚೀಲ ಸಂಸ್ಕೃತಿ ಎಂದು ಕಾಂಗ್ರೆಸ್, ಡಿಕೆಶಿ, ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ನಿಮ್ಮ ಮತಕ್ಕೆ ಬೆಲೆ ಕೊಡೋ ಕೆಲಸ ನಾವು ಮಾಡ್ತೀವಿ. ಕಾಂಗ್ರೆಸ್ ಈಗಾಗಲೇ ಸೋತು ಹೋಗಿದೆ. ಹೀಗಾಗಿ ಹಣ ಹಂಚಿಕೆ ಮಾಡ್ತಿದ್ದಾರೆ ಅಂತ ಆರೋಪ ಮಾಡ್ತಿದೆ. ಸೂರ್ಯ-ಚಂದ್ರ ಇರೋವಷ್ಟು ಸತ್ಯ ಭೂಸನೂರು 25 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

ಬೊಮ್ಮಾಯಿ ಅವರು ಪ್ರಚಾರವನ್ನು ಮುಂದುವರೆಸಿದ್ದು, ಕಕ್ಕಳಮೇಲಿಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಸಚಿವರಾದ ಸಿಸಿ ಪಾಟೀಲ್, ಕಾರಜೋಳ, ಭೈರತಿ ಬಸವರಾಜ್ ಅವರು ಇದಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಅಭ್ಯರ್ಥಿ ರಮೇಶ್ ಭೂಸನೂರು ಪ್ರಚಾರದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *