ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ದಾವಣಗೆರೆಯಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತ

Public TV
3 Min Read

– ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿ ಭೀತಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಮುಂದುವರಿದ್ದು, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಅವಾಂತರಗಳು ಕೂಡ ಮುಂದುವರಿದಿದೆ. ಮಳೆರಾಯನ ಅಬ್ಬರಕ್ಕೆ ದಾವಣಗೆರೆಯ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯತ್ತಿರುವ ಭಾರೀ ಮಳೆಗೆ ಹರಿಹರ ತಾಲೂಕಿನ ಬಾನುವಳ್ಳಿ, ಕಮಲಾಪುರ, ಯಲವಟ್ಟಿ ಸೇರಿದಂತೆ ಹಲವು ಕಡೆ ರೈತರ ಜಮೀನುಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಜೊತೆಗೆ 20ಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ.

ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆರಾಗಿದೆ. ಹಾವೇರಿ ಆಲದಕಟ್ಟಿ, ಕರ್ಜಗಿ ಹಲವೆಡೆ ಮಳೆಯಾಗುತ್ತಿದ್ದು, ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ 15ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ದಿನಸಿ ವಸ್ತುಗಳು, ಬಟ್ಟೆ, ಹಾಸಿಗೆ ನೀರುಪಾಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯದಲ್ಲಿ ಮಳೆ ಸುರಿದಿದೆ. 2 ಗಂಟೆಗಳ ಸತತ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿತ್ತು. ಕೊಟ್ಟಾರಚೌಕಿ, ಮಾಲೆಮಾರ್, ಪಡೀಲ್, ಕುಳೂರು ಪ್ರದೇಶದ ರಸ್ತೆಯಲ್ಲಿ ಸಂಚಾರ ಕಷ್ಟವಾಗಿತ್ತು. ಹಾಗಾಗಿ ಖುದ್ದು ಮೇಯರ್ ಪ್ರೇಮಾನಂದ ಶೆಟ್ಟಿ ರಸ್ತೆಗಳಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದನ್ನೂ ಓದಿ: ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ

ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆ ಗದಗ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜಿಲ್ಲೆಯ ಬೆಂತೂರ ಗ್ರಾಮದಲ್ಲಿ ಶೇಂಗಾ ಬೆಳೆ ನೀರಿನಲ್ಲಿ ಮುಳುಗಡೆಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದಾಗಿ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಹಾಸನ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಅರಸೀಕೆರೆ, ಅರಕಲಗೂಡ ತಾಲೂಕಿನ ಹಲವು ಗ್ರಾಮಗಳಲ್ಲಿ ತತ್ತರಿಸಿಹೋಗಿವೆ. ಅರಸೀಕೆರೆಯ ಮುರುಂಡಿ ಬಿ.ತಾಂಡ್ಯಾದಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯೊಂದು ಕುಸಿದಿದೆ. ಜೊತೆಗೆ ಹಲವು ಹಳ್ಳಿಗಳಲ್ಲಿ ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಗಳು ಕೆರೆಯಂತಾಗಿವೆ.

ಅರಕಲಗೂಡು ತಾ. ಕಾಳೇನಹಳ್ಳಿ ಗ್ರಾಮದ ಸುತ್ತಮುತ್ತ ಭಾರಿ ಮಳೆಯಿಂದಾಗಿ ಕೆರೆಕೋಡಿ ಬಿದ್ದಿದೆ. ಪರಿಣಾಮ ನೂತನವಾಗಿ ಸೇತುವೆ ನಿರ್ಮಿಸುತ್ತಿರುವ ಜಾಗದಲ್ಲಿ ನೀರು ಸರಾಗವಾಗಿ ಹರಿಯದೆ ನೂರಾರು ಎಕರೆ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಕಳೆದೊಂದು ವಾರದಿಂದ ತೋಟದಲ್ಲಿ ನೀರು ನಿಂತಿರುವುದರಿಂದ ಅಡಿಕೆ ಮರಗಳು ಬುಡಸಮೇತ ಬೀಳುವ ಆತಂಕ ಎದುರಾಗಿದೆ. ಮಳೆಯಿಂದಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾದ್ರೂ ಸಹ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ಅಸಹಾಯಕತೆಯಿಂದ ಕೈಕಟ್ಟಿ ಕುಳಿತುಕೊಂಡಿದ್ದಾರೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮಳೆಹಾನಿಗೊಳಗಾದ ತೋಟದ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ.

ಭಾರೀ ಮಳೆಯ ನಡುವೆಯೇ ಚಿಕ್ಕಮಗಳೂರಿನಲ್ಲಿ ಕಾಫಿ ಕಟಾವು ಮಾಡುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್‍ನಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನು ಬೆಳೆಯಲಾಗಿದೆ. ನಿರಂತರ ಮಳೆಯಿಂದಾಗಿ ಗಿಡದಲ್ಲೇ ಕಾಫಿ ಹಣ್ಣಾಗುತ್ತಿದ್ದು, ಉದುರಿ ಮಣ್ಣು ಪಾಲಾಗುತ್ತಿವೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ, ಕಾರ್‍ಬೈಲ್ ಗ್ರಾಮದ ಸುತ್ತಮುತ್ತ ಕೂಲಿ ಕಾರ್ಮಿಕರು ಮಳೆಯಲ್ಲಿ ನೆನೆದುಕೊಂಡೇ ಕಾಫಿಯನ್ನ ಕುಯ್ಯುವಂತಾಗಿದೆ. ಈಗಾಗಲೇ ಸಾಕಷ್ಟು ಕಾಫಿ ಮಣ್ಣು ಪಾಲಾಗಿದೆ. ಇದನ್ನೂ ಓದಿ: ಬಿಎಸ್‍ವೈ ಆಪ್ತರ ಬಳಿ 765 ಕೋಟಿ ಅಕ್ರಮ ಆಸ್ತಿ

ಮಳೆ-ಗಾಳಿಗೆ ಕಾಯಿಗಳು ಉದುರಿದ್ದು, ಅಳಿದುಳಿದ ಕಾಫಿಗೆ ಈಗ ಮತ್ತೆ ಮಳೆ ಕಾಟ ಆರಂಭವಾಗಿದೆ. ಹೀಗಾಗಿ, ಬೆಳೆಗಾರರು ಮಳೆಯಲ್ಲೇ ಕಾಫಿಯನ್ನ ಕೊಯ್ಲು ಮಾಡುವಂತಾಗಿದೆ. ಕಳೆದ ಮೂರ್ನಾಲ್ಕು ವರ್ಷದಿಂದ ಭಾರೀ ಮಳೆಯಿಂದ ಬೆಳೆ ಕಳೆದುಕೊಂಡಿದ್ದ ಬೆಳೆಗಾರರು ಈ ವರ್ಷವೂ ಬೆಳೆಯನ್ನ ಕಳೆದುಕೊಳ್ಳುವ ಆತಂಕದಿದ್ದಾರೆ. ಮಧ್ಯಮ ವರ್ಗದ ಬೆಳೆಗಾರರು ಬದುಕು ಮತ್ತಷ್ಟು ಶೋಚನಿಯವಾಗಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಬೆಳೆಗಾರರ ನೆರವಿಗೆ ನಿಲ್ಲಬೇಕೆಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಹಿನ್ನೆಲೆ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಸಭೆ ನಡೆಸಿದ್ರು. ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಭೆ ಬಳಿಕ ಮಾತನಾಡಿದ ಸಿಎಂ, ಅಕ್ಟೋಬರ್ ತಿಂಗಳಲ್ಲಿ 30% ಹೆಚ್ಚುವರಿ ಮಳೆಯಾಗಿದೆ. ಮಳೆಗೆ ಈವರೆಗೆ 21 ಜನ ಸಾವನ್ನಪ್ಪಿದ್ದಾರೆ. 4.71 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬ, ರಸ್ತೆ, 2 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು ಕೂಡಲೇ ಪರಿಹಾರ ಕೊಡಲು ಸೂಚಿಸಿದ್ದೇನೆ ಅಂತ ತಿಳಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *