ಒಂದು ಬಿಂದಿಗೆ ನೀರಿಗಾಗಿ ಐದು ಕಿ.ಮೀ.ನಡೀಬೇಕು- ಹನಿ ನೀರಿಗಾಗಿ ಗ್ರಾಮದಲ್ಲಿ ಹಾಹಾಕಾರ

Public TV
2 Min Read

– ಉರಿ ಬಿಸಿಲಿನಲ್ಲಿ, ಮಳೆಯಲ್ಲಿ ನೀರಿಗಾಗಿ ಬಿಂದಿಗೆ ಹಿಡಿದು ಕಿ.ಮೀ.ಗಟ್ಟಲೇ ಹೋಗಬೇಕು
– ವಯಸ್ಸಾದವರಿಗೆ, ಅಸಹಾಯಕರಿಗೆ ಹಳ್ಳದ ಕೆಸರು ನೀರೇ ಗತಿ

ಯಾದಗಿರಿ: ಸುಮಾರು 5 ಕಿ.ಮೀ.ದೂರದಲ್ಲಿರುವ ಬೋರ್ ವೆಲ್‍ನಿಂದ ಗ್ರಾಮದ ಜನ ನೀರು ತರುತ್ತಾರೆ. ಹನಿ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರವಿದೆ. ವಯಸ್ಸಾದವರಂತೂ ಹಳ್ಳದ ಕೆಸರು ನೀರನ್ನೇ ಕುಡಿದು ಬದುಕುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಜಿಲ್ಲೆಯ ಶಹಾಪೂರ ತಾಲೂಕಿನ ನಂದಿಹಳ್ಳಿ ಜೆ ಗ್ರಾಮದ ಜನರ ಪರಿಸ್ಥಿತಿ ಹೇಳತಿರದಾಗಿದೆ. ಗ್ರಾಮದಲ್ಲಿ ಸುಮಾರು 400 ಮನೆಗಳಿವೆ, ಹಲವಾರು ವರ್ಷಗಳಿಂದ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಎಷ್ಟೋ ಚುನಾವಣೆಗಳು, ಎಷ್ಟೋ ಜನಪ್ರತಿನಿಧಿಗಳು ಈ ಗ್ರಾಮಕ್ಕೆ ಬಂದು ಹೋದರೂ ಗ್ರಾಮಕ್ಕೆ ಮಾತ್ರ ಹನಿ ಶುದ್ಧ ನೀರು ನೀಡಲು ಆಗಿಲ್ಲ. ಇದನ್ನೂ ಓದಿ: ನಿವೃತ್ತ ನೌಕರನ ಸ್ನೇಹ ಬೆಳೆಸಿದ ಕಾಗೆ- ಮನೆಯ ಸದಸ್ಯನಾದ ಕಥೆ!

ನಂದಿಹಳ್ಳಿ ಜೆ ಗ್ರಾಮದಲ್ಲಿ ಸಿಗುವ ನೀರಿನಲ್ಲಿ ಅತಿಯಾದ ಫ್ಲೋರೈಡ್ ಮತ್ತು ಉಪ್ಪಿನ ಅಂಶವಿದೆ. ಹೀಗಾಗಿ ಈ ನೀರು ನಿತ್ಯದ ಬಳಕೆಗೆ ಯೋಗ್ಯ ಹೊರತು, ಕುಡಿಯಲು ಮತ್ತು ಅಡುಗೆಗಲ್ಲ. ಹೀಗಾಗಿ ಗ್ರಾಮಸ್ಥರು ಶುದ್ಧ ನೀರಿಗಾಗಿ ಐದು ಕಿಲೋಮೀಟರ್ ದೂರದಲ್ಲಿರುವ ಮರಿಯಮ್ಮ ತಾಯಿ ದೇವಸ್ಥಾನದ ಬಳಿಯಲ್ಲಿರುವ ಬೋರ್ ವೆಲ್ ನ್ನು ನೆಚ್ಚಿಕೊಂಡಿದ್ದಾರೆ. ಬೈಕ್ ಇರುವವರು ಬೈಕ್ ನಲ್ಲಿ ನೀರು ತರತ್ತಾರೆ. ಬಡವರು, ಅಸಹಾಯಕರು ಮತ್ತು ವಯಸ್ಸಾದವರು ಬಿಂದಿಗೆ ನೀರಿಗಾಗಿ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಉರಿ ಬಿಸಿಲಿನಲ್ಲಿ, ಮಳೆಯಲ್ಲಿ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿಯಿದೆ. ಬೆಳಗ್ಗೆ ಎದ್ದು ಒಂದು ಬಿಂದಿಗೆ ನೀರು ತರೋದೆ ಇಲ್ಲಿ ಹರಸಹಾಸದ ಕೆಲಸವಾಗಿದೆ.

ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ನೆನಪಾಗುವ ಈ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ನೆನಪಾಗೋದು ಮತ್ತೆ ಚುನಾವಣೆ ಬಂದಾಗ. ಗ್ರಾಮದ ಪಕ್ಕದಲ್ಲಿ ಹಳ್ಳವಿದೆ. ಈ ಹಿಂದೆ ಹಳ್ಳದಲ್ಲಿ ಒರತೆ ತೋಡಿ ಅಲ್ಲಿಂದ ನೀರು ತರಲಾಗುತ್ತಿತ್ತು. ಆದರೆ ಸದ್ಯ ಹಳ್ಳ ಕಲುಷಿತಗೊಂಡಿದ್ದು, ಆ ನೀರು ಸಹ ಕುಡಿಯಲು ಯೋಗವಿಲ್ಲ. ಮುಖ್ಯ ರಸ್ತೆ ಬಳಿ ಇರುವ ಮರಿಯಮ್ಮ ತಾಯಿ ದೇವಸ್ಥಾನದ ಬೋರವೇಲ್ ನಿಂದ ಪೈಪ್ ಲೈನ್ ಮೂಲಕ ಗ್ರಾಮಕ್ಕೆ ನೀರು ತರಬಹುದು. ಆದರೆ ಇದನ್ನು ಮಾಡುವ ಇಚ್ಛಾಶಕ್ತಿ ಮಾತ್ರ ಅಧಿಕಾರಿಗಳಿಗಾಲಿ, ಜನಪ್ರತಿನಿಧಿಗಳಿಗಾಲಿ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *