ಮಕ್ಕಳಿಗೆ ಕಳಪೆ ಗುಣಮಟ್ಟದ ಚಿಕ್ಕಿ – ತನಿಖೆಗೆ ರೇವಣ್ಣ ಆಗ್ರಹ

Public TV
2 Min Read

ಹಾಸನ: ಸರ್ಕಾರ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರಿಗೆ ಪೌಷ್ಟಿಕ ಆಹಾರ ನೀಡಲು ಮತ್ತು ಅಂಗನವಾಡಿ ಪರಿಕರ ಖರೀದಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ನೀಡಲು ಸರಿಯಾದ ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲೂ ಹಾಸನದಲ್ಲಿ ಹಣ ಲೂಟಿಯಾಗುತ್ತಿದೆ ಮತ್ತು ಗುಣಮಟ್ಟಣ ಆಹಾರ ಕೂಡ ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

ಸರ್ಕಾರ ಇಡೀ ರಾಜ್ಯದ ಅಂಗನವಾಡಿ ಮಕ್ಕಳಿಗೆ ಚಿಕ್ಕಿಕೊಡುತ್ತಿದ್ದು, ಪ್ರತಿ ಚಿಕ್ಕಿಗೆ 2 ರೂಪಾಯಿ ದರ ನಿಗದಿ ಮಾಡಿದೆ. ಚಿಕ್ಕಿಗೆ ಶೇಂಗಾ, ಬೆಲ್ಲ ಬಳಸುತ್ತಾರೆ. ಆದರೆ ಹಾಸನದಲ್ಲಿ ನೀಡುತ್ತಿರುವ ಚಿಕ್ಕಿ ಕಡಿಮೆ ತೂಕದ್ದಾಗಿದ್ದು, ಒಂದು ಚಿಕ್ಕಿಗೆ ಮೂಲಭೂತವಾಗಿ 80 ಪೈಸೆ ಬೀಳುತ್ತಿದೆ. ಸರ್ಕಾರ ಒಂದು ಚಿಕ್ಕಿ ಎಷ್ಟು ತೂಕ ಇರಬೇಕು ಎಂದು ಮಾನದಂಡ ನಿಗದಿಪಡಿಸದ ಕಾರಣ ಮಕ್ಕಳಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಪ್ರತಿ ತಿಂಗಳು ಹಾಸನ ಜಿಲ್ಲೆಯೊಂದಕ್ಕೆ 25 ಲಕ್ಷ ಚಿಕ್ಕಿ ಬೇಕು. ಪ್ರತಿ ತಿಂಗಳು ಮಕ್ಕಳಿಗೆ ನೀಡುವ ಚಿಕ್ಕಿಗೆ ಸುಮಾರು 50 ಲಕ್ಷ ಬಿಲ್ ಆಗುತ್ತಿದೆ. ಆದರೆ ಇವರು ಕಡಿಮೆ ದರಕ್ಕೆ ಚಿಕ್ಕಿ ಖರೀದಿಸಿ ಹೆಚ್ಚು ಬಿಲ್ ಹಾಕಿಕೊಂಡು ಹಣ ನುಂಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರವಲ್ಲದೆ, ಅಂಗನವಾಡಿಗೆ ಖರೀದಿಸುವ ಪ್ರಚಾರ ಪರಿಕರದಲ್ಲೂ ಅಕ್ರಮ ಎಸಗಿದ್ದಾರೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ರೇವಣ್ಣ ಆರೋಪ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಸಚಿವರಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲಅಂತಿದ್ದಾರೆ. ಈ ಬಗ್ಗೆ ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪರಶುರಾಮ್ ಶೆಟ್ಟಪ್ಪನವರ್ ಅವರನ್ನು ಕೇಳಿದರೆ, ನಾನು ಈ ಬಗ್ಗೆ ಕೂಡಲೇ ಗಮನಹರಿಸಿ ಪ್ರಚಾರ ಪರಿಕರ ಮತ್ತು ಚಿಕ್ಕಿ ನೀಡುವಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

ಒಟ್ಟಾರೆ ಅಂಗನವಾಡಿಗೆ ಹೋಗುವ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಪ್ರತಿ ವರ್ಷ ಕೋಟಿ, ಕೋಟಿ ಹಣ ಬಿಡುಗಡೆ ಮಾಡುತ್ತಿದೆ. ಆದರೆ ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ಪುಟಾಣಿ ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನೂ ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *