ಎಲ್ಲಾ ಪ್ರಜೆಗಳಿಗೆ ಸಿಗಲಿದೆ ಹೆಲ್ತ್ ಐಡಿ ಕಾರ್ಡ್ – ವಿಶೇಷತೆ ಏನು? ಲಾಭ ಏನು?

Public TV
2 Min Read

ನವದೆಹಲಿ: ಇನ್ನು ಮುಂದೆ ದೇಶದ ಎಲ್ಲ ಪ್ರಜೆಗಳು ಒಂದೇ ಕ್ಲಿಕ್ ನಲ್ಲಿ ತಮ್ಮ ಆರೋಗ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

ದೇಶದ ಜನತೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸಮರ್ಪಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯರು ಈಗ ಡಿಜಿಟಲ್ ಹೆಲ್ತ್ ಐಡಿಯನ್ನು ಪಡೆಯಬಹುದು. ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಹೇಗೆ ಯುಪಿಐ ಕಾರ್ಯನಿರ್ವಹಿಸುತ್ತದೋ ಅದೇ ರೀತಿಯಾಗಿ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಪ್ರತಿಯೊಬ್ಬ ನಾಗರಿಕರ ಆರೋಗ್ಯ ದಾಖಲೆಗಳು ಈಗ ಡಿಜಿಟಲ್ ನಲ್ಲಿ ಸುರಕ್ಷಿತವಾಗಿರುತ್ತದೆ. ಬಡ ಮತ್ತು ಮಧ್ಯಮ ವರ್ಗದ ವೈದ್ಯಕೀಯ ಚಿಕಿತ್ಸೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇದು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮೂರು ವರ್ಷಗಳ ಹಿಂದೆ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.

130 ಕೋಟಿ ಆಧಾರ್ ಐಡಿಗಳು, 118 ಕೋಟಿ ಮೊಬೈಲ್ ಚಂದಾದಾರರು, ಸುಮಾರು 80 ಕೋಟಿ ಇಂಟರ್ನೆಟ್ ಬಳಕೆದಾರರು ಮತ್ತು 43 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳು – ಇಂತಹ ಬೃಹತ್, ಸಂಪರ್ಕಿತ ಮೂಲಸೌಕರ್ಯವನ್ನು ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಕಾರ್ಡ್ ನಲ್ಲಿ 14 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. ಪ್ರತಿ ಪ್ರಜೆಯ ಆರೋಗ್ಯ ಖಾತೆಯಾಗಿ ಇದು ಕೆಲಸ ಮಾಡುತ್ತದೆ. ಈ ಕಾರ್ಡ್ ನಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳ ಸಂಗ್ರಹ ಇರಲಿದೆ. ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಷನ್ ಸಹಾಯದಿಂದ ಲಿಂಕ್ ಮಾಡಬಹುದು.

ಕಳೆದ ವರ್ಷ ಘೋಷಣೆ:
ಕಳೆದ ವರ್ಷದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಾಯೋಗಿಕ ಯೋಜನೆಯನ್ನು ಪ್ರಧಾನಿ ಘೋಷಿಸಿದ್ದರು. 6 ಕೇಂದ್ರಾಡಳಿತ ಪ್ರದೇಶದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.

ಲಾಭ ಹೇಗೆ?
ಈ ಸೇವೆ ದೇಶವ್ಯಾಪಿ ಇರಲಿದೆ. ವ್ಯಕ್ತಿ ಯಾವುದೇ ಮೂಲೆಗೆ ಹೋದಾಗ ಸಮಸ್ಯೆಯಾಗಿ ಆಸ್ಪತ್ರೆ ಸೇರಿದಾಗ ಆತನ ಆರೋಗ್ಯದ ಮಾಹಿತಿ ಕೂಡಲೇ ಸಿಗುವುದಿಲ್ಲ. ಆದರೆ ಈ ಆಪ್‍ನಲ್ಲಿ ವಿವರ ನೀಡಿದ್ದರೆ ಕೂಡಲೇ ವೈದ್ಯರಿಗೆ ಈ ಹಿಂದೆ ರೋಗಿಗೆ ಏನಾಗಿತ್ತು? ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು? ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು ಈ ಎಲ್ಲ ವಿವರಗಳು ಕೂಡಲೇ ಸಿಗಲಿದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.  ಇದನ್ನೂ ಓದಿ: ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

ಈ ಐಡಿ ಕಾರ್ಡ್ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಇಚ್ಛೆಯಿಂದ ಕಾರ್ಡ್ ಮಾಡಿಸಬಹುದು. ಆರಂಭದಲ್ಲಿ ಹೆಲ್ತ್ ಐಡಿ, ವೈಯಕ್ತಿಕ ಆರೋಗ್ಯ ಮಾಹಿತಿ, ಡಿಜಿ ಡಾಕ್ಟರ್ ಮತ್ತು ಹೆಲ್ತ್ ರಿಜಿಸ್ಟ್ರಿ ಇರಲಿದೆ. ನಂತರದ ದಿನಗಳಲ್ಲಿ ಇ ಫಾರ್ಮಾಸಿ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನು ಸೇರಿಸಲಾಗುತ್ತದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ದೇಶಗಳಲ್ಲಿ ಸರ್ಕಾರವೇ ಈ ರೀತಿಯ ಆರೋಗ್ಯ ಕಾರ್ಡ್‍ಗಳನ್ನು ನೀಡಿವೆ.

Share This Article
Leave a Comment

Leave a Reply

Your email address will not be published. Required fields are marked *