ಡಿಜೆ ಹಳ್ಳಿ ಗಲಭೆ ಪ್ರಕರಣ- ವಾಹನಗಳಿಗೆ ಬೆಂಕಿ ಹಚ್ಚಿದ್ದ ತಬ್ರೇಜ್ ಬಂಧನ

Public TV
1 Min Read

– ವಾಟ್ಸಪ್ ಗ್ರೂಪ್ ನಲ್ಲಿ ಗಲಭೆಗೆ ಪ್ರಚೋದನೆ
– ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳೊಂದಿಗೆ ತಬ್ರೇಜ್ ನಂಟು

ಬೆಂಗಳೂರು: ನಗರದ ಡಿ.ಜೆ.ಹಳ್ಳಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿ ತಬ್ರೇಜ್‍ನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಗಲಭೆ ವೇಳೆ 35 ವರ್ಷದ ತಬ್ರೇಜ್ ಪೊಲೀಸ್ ವಾಹನ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದ. ಗಲಭೆ ಬಳಿಕ ತಬ್ರೇಜ್ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದಿಂದ ಕಾರ್ಯಾಚರಣೆ ನಡೆಸಿ ಇದೀಗ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ. ಇದನ್ನೂ ಓದಿ: ಡಿ.ಜೆ ಹಳ್ಳಿ ಪ್ರಕರಣದ ಎನ್ಐಎ ಆರೋಪಪಟ್ಟಿ ಪೂರ್ವ ನಿರ್ದೇಶಿತ: ಎಸ್​​ಡಿಪಿಐ

ಆಗಸ್ಟ್ 12, 2020ರಂದು ಡಿ.ಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ತಬ್ರೇಜ್ ವಾಟ್ಸಪ್ ಗ್ರೂಪ್ ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದ. ಅಲ್ಲದೆ ಈತ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಎಂಬುದು ಸಹ ಇದೇ ವೇಳೆ ಬೆಳಕಿಗೆ ಬಂದಿದೆ.

ನಡೆದಿದ್ದೇನು?
ಶಾಸಕರ ಆಪ್ತ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ಆಗಸ್ಟ್ 11ರಂದು ರಾತ್ರಿ 8ಕ್ಕೆ ಕಾವಲ್ ಭೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿತ್ತು. 100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದರು. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಇತ್ತ ಗಲಭೆಗೂ ಮುನ್ನ ಶಾಸಕರು ಮನೆ ಖಾಲಿ ಮಾಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಬಂಧಿಸದಂತೆ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *