ಬೆಂಗಳೂರು: ಒಂದೇ ಕುಟುಂಬದ ಐವರ ಸಾವು ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ಘನಘೋರ ಘಟನೆಯೊಂದು ಅಂಧ್ರಳ್ಳಿ ಮುಖ್ಯರಸ್ತೆಯ ಚೇತನ್ ಸರ್ಕಲ್ ನ ವಿನಾಯಕನಗರದ ಇದೇ ಮನೆಯಲ್ಲಿ ನಡೆದುಹೋಗಿತ್ತು. ಭಾನುವಾರ ಮನೆಯಿಂದ ಹೊರಹೋಗಿದ್ದ ಮನೆಯ ಯಜಮಾನ ಹಲ್ಲೆಗೆರೆ ಶಂಕರ್ ವಾಪಸ್ ಬಂದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರ ಉಸಿರು ನಿಂತಿತ್ತು. ಹಾಗಾದ್ರೆ ಮನೆ ಮಾಲೀಕ ಮನೆಗೆ ಬಂದಿದ್ದು ಎಷ್ಟೊತ್ತಿಗೆ? ಮೊದಲ ಮೃತದೇಹ ಕಾಣಿಸಿದ್ದು ಯಾರದ್ದು? ಯಾವ ರೂಮ್ ನಲ್ಲಿ ಯಾರೆಲ್ಲ ಶವವಾಗಿದ್ದರು ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಶಂಕರ್ ತಮ್ಮ ನಿವಾಸದಿಂದ ಭಾನುವಾರ ತೆರಳಿದ್ದು, ಭಾನುವಾರ ಅಥವಾ ಸೋಮವಾರ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮೈಸೂರು ಸೇರಿದಂತೆ ಬೇರೆ ಬೇರೆ ನಗರಕ್ಕೆ ತೆರಳಿದ್ದ ಹಲ್ಲೆಗೆರೆ ಶಂಕರ್ ನಿನ್ನೆ ಸಂಜೆ 4.30 ರಿಂದ 5 ಗಂಟೆ ಸುಮಾರಿಗೆ ಮನೆ ಬಳಿಗೆ ಬಂದಿದ್ದಾರೆ.
ಮನೆ ಬಳಿ ವಾಸನೆ ಬರ್ತಾ ಇದ್ದಿದ್ದರಿಂದ ಪಕ್ಕದ ಮನೆಯವರಿಗೆ ಯಾರಾದ್ರೂ ಹೊರಬಂದಿದ್ದರಾ ಎಂದು ವಿಚಾರಿಸಿದ್ದರು. ಮನೆಯಿಂದ ದುರ್ವಾಸನೆ ಬರ್ತಾ ಇದ್ದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡುವಂತೆ ಪಕ್ಕದ ಮನೆಯ ನಿವಾಸಿ ಪರಮೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ
ಅದರಂತೆ ಸಂಜೆ 5.10ಕ್ಕೆ ಮನೆಯಿಂದ ಸ್ವಲ್ಪ ದೂರ ಬಂದಿದ್ದ ಶಂಕರ್ 100ಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ. ಸಂಜೆ 5.20ಕ್ಕೆ ಬಂದ ಬೀಟ್ ಪೊಲೀಸರಿಗೆ ಹಾಲ್ನಲ್ಲಿ ಶಂಕರ್ ಪತ್ನಿ ಭಾರತಿ ಮೃತದೇಹ ಕಂಡಿದೆ. ಅಲ್ಲಿಗೆ ಏನೋ ಯಡವಟ್ಟಾಗಿದೆ ಅಂದುಕೊಂಡ ಪೊಲೀಸರು ಇನ್ಸ್ಪೆಕ್ಟರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆ ಇನ್ಸ್ಪೆಕ್ಟರ್ 6ರಿಂದ 6.30 ಸುಮಾರಿಗೆ ಬಂದು ಬಾಗಿಲು ಒಡೆದು ಮನೆ ಒಳಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಸಾಲು ಸಾಲು ಮೃತದೇಹ ಕಂಡಿದೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಒಂದೊಂದು ರೂಮಲ್ಲಿ ಆತ್ಮಹತ್ಯೆ: ಮನೆಯ ಕೆಳ ಮಹಡಿಯನ್ನು ಶಂಕರ್ ಬಾಡಿಗೆಗೆ ನೀಡಿದ್ದರು. ಮೊದಲ ಮಹಡಿಯ ಹಾಲ್ನಲ್ಲಿ ಶಂಕರ್ ಪತ್ನಿ ಭಾರತಿ ಮೃತದೇಹ ಮತ್ತು ಇದ್ದ ಒಂದು ರೂಮ್ ನಲ್ಲಿ ಕಿರಿಯ ಪುತ್ರಿ ಸಿಂಧುರಾಣಿ ಮತ್ತು ಆಕೆಯ 9 ತಿಂಗಳ ಮಗು ಮೃತದೇಹ ಪತ್ತೆಯಾಗಿದೆ. ಎರಡನೇ ಮಹಡಿಯ ಪ್ರತ್ಯೇಕ ಕೊಠಡಿಯಲ್ಲಿ ಹಿರಿಯ ಪುತ್ರಿ ಸಿಂಚನ ಮತ್ತು ಪುತ್ರ ಮಧುಸಾಗರ್ ದೇಹಗಳು ಪತ್ತೆಯಾಗಿವೆ.