ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

Public TV
2 Min Read

– ಶೀಘ್ರ 5,000 ಶಿಕ್ಷಕರ ನೇಮಕಕ್ಕೆ ಕ್ರಮ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 12 ರಿಂದ 13 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ನಗರದ ಅಗಲಗುರ್ಕಿ ಬಳಿಯ ಬಿಜಿಎಸ್ ಶಾಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 12-13 ಸಾವಿರ ಮಂದಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಕೊರತೆಗೆ ಎರಡು ಪ್ರಮುಖ ಕಾರಣಗಳಿವೆ. ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ವರ್ಗಾವಣೆಗಳು ಆಗಲಿಲ್ಲ. ಕಳೆದ ವರ್ಷ ಪರೀಕ್ಷೆ ಮಾಡಿ 10,000 ಮಂದಿ ಶಿಕ್ಷಕರ ನೇಮಕಕ್ಕೆ ತಯಾರಿ ಮಾಡಲಾಗಿತ್ತು. ಪರೀಕ್ಷೆಯಲ್ಲಿ 3,000 ಮಂದಿ ಮಾತ್ರ ಅರ್ಹರಾದರು. ಮತ್ತೊಂದೆಡೆ ಕೋವಿಡ್ ಬಂದ ನಂತರ ಅರ್ಥಿಕ ವ್ಯವಸ್ಥೆ ನಿಧಾನ ಆಯಿತು. ಈಗ 5000 ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದರು. ಇದನ್ನೂ ಓದಿ: ಸೆ.17 ರಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಆರಂಭ

ಕೊರೊನಾ ಮೂರನೇ ಅಲೆ ಎಚ್ಚರಿಕೆ ಇರುವುದರಿಂದ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಆಗಿಲ್ಲ. ತಜ್ಞರ ಸಲಹಾ ಸಮಿತಿ ಜೊತೆ ಚರ್ಚಿಸಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಓದಿರುವವರು ಯಾರೂ ಹಿಂದಿ ದಿವಸ್ ಅಂತ ವಿರೋಧ ಮಾಡಲ್ಲ. ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂದು ಯೋಚನೆ ಮಾಡಿರುವ ಸರ್ಕಾರ ನಮ್ಮದು. ದೇಶದಲ್ಲಿ ಸ್ವದೇಶಿ ಸ್ವಾವಲಂಬಿ ಶಿಕ್ಷಣ ಕೊಡಬೇಕೆಂದು ಮಹಾತ್ಮ ಗಾಂಧೀಜಿ ಸೇರಿ ಆನೇಕ ತಜ್ಞರು ಹೇಳಿದ್ದರು. ಆ ನಿಟ್ಟಿನಲ್ಲಿ ಮಕ್ಕಳ ಕೈಗೆ, ಬುದ್ಧಿಗೆ, ಹೃದಯಕ್ಕೆ ಶಿಕ್ಷಣ ಕೊಡಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಯತ್ನ ಮಾಡಿದೆ. ಕಾಂಗ್ರೆಸ್‍ನವರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಗೊಂದಲಗಳಿರಬಹದು. ಅದು ಪಾರ್ಲಿಮೆಂಟ್ ನಲ್ಲಿ ಹಾಗೂ ದೇಶದ ಅನೇಕ ಕಡೆ ಸಭೆ, ಸೆಮಿನಾರ್ ಗಳಲ್ಲಿ ಚರ್ಚೆಯಾದ ನಂತರವೇ ಜಾರಿಯಾದ ನಿರ್ಣಯ. ಈ ಬಗ್ಗೆ ಅವರು ತಿಳಿದರೆ ಸರಿಹೋಗಬಹುದು. ಅವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *