ವಿಜೃಂಭಣೆಯಿಂದ ನೆರವೇರಿದ ಮಾಡಾಳು ಸ್ವರ್ಣಗೌರಿ ಉತ್ಸವ

Public TV
1 Min Read

– ಹತ್ತು ದಿನ ನಡೆಯುತ್ತಿದ್ದ ಪೂಜೆ ಒಂದೇ ದಿನಕ್ಕೆ ಸೀಮಿತ

ಹಾಸನ: ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಸ್ವರ್ಣಗೌರಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಮಾಡಾಳು ಸ್ವರ್ಣಗೌರಿ ನಾಡಿನಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿರುವ ದೇವಿ. ಪ್ರತಿ ವರ್ಷದ ಗೌರಿ ಹಬ್ಬಕ್ಕೂ ಮುನ್ನ ಬರುವ ಹುಣ್ಣಿಮೆಯಂದು ಸ್ಥಳೀಯ ಶಿವಾಲಯದಿಂದ ಪವಿತ್ರ ಮಣ್ಣು ತಂದು, ದೇವಿಯ ಉತ್ಸವಮೂರ್ತಿಯನ್ನು ತಯಾರಿಸಲಾಗುತ್ತದೆ. ಇದೆಲ್ಲವೂ ಸಂಪ್ರದಾಯಬದ್ಧವಾಗಿಯೇ ನಡೆಯಬೇಕು. ಹೀಗಾಗಿ ಶ್ರದ್ಧಾಭಕ್ತಿಯಿಂದ 8 ರಿಂದ 10 ದಿನಗಳ ಅವಧಿಯಲ್ಲಿ ಅಮ್ಮನ ಮೂರ್ತಿಗೆ ಅಂತಿಮ ರೂಪ ನೀಡಲಾಗುತ್ತದೆ. ಇಡೀ ಮೂರ್ತಿ ರೂಪ ಪಡೆಯೋದು ಮಣ್ಣು ಮತ್ತು ಕಡಲೆ ಹಿಟ್ಟಿನಿಂದ.

ಹೀಗೆ ರೂಪ ಪಡೆದ ದೇವಿಯನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು. ದಾರಿಯುದ್ದಕ್ಕೂ ಭಕ್ತರು ಕರ್ಪೂರ ಹಚ್ಚಿ, ದೇವಿಗೆ ಜೈಕಾರ ಹಾಕಿದರು. ನಂತರ ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ವಿಶೇಷ ಪೂಜೆಯೊಂದಿಗೆ ಲಿಂಗೈಕ್ಯ ಅಜ್ಜಯ್ಯ ಕೊಟ್ಟಿರುವ ಚಿನ್ನದ ಮೂಗುತಿ ತೊಡಿಸಿದರು. ನಂತರ ತ್ರಿಕಾಲ ಪೂಜೆ ನೇರವೇರಿಸಲಾಯಿತು. ಸಚಿವ ಮಾಧುಸ್ವಾಮಿ, ಶಾಸನ ಶಿವಲಿಂಗೇಗೌಡ ಆಗಮಿಸಿ ದೇವಿ ದರ್ಶನ ಪಡೆದರು. ಇದನ್ನೂ ಓದಿ: ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

ಪ್ರತಿ ವರ್ಷ ಒಂಭತ್ತು ದಿನಗಳ ಕಾಲ ಸ್ವರ್ಣಗೌರಿಯನ್ನು ಕೂರಿಸಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿತ್ತು. ಹತ್ತನೇ ದಿನ ಕಲ್ಯಾಣಿಯಲ್ಲಿ ಭಕ್ತರ ಸಮ್ಮುಖದಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು. ಈ ವೇಳೆ ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ದೇವಿಯ ದರ್ಶನ ಪಡೆಯುತ್ತಿದ್ದರು. ಈ ಬಾರಿ ಕೊರೊನಾ ಕಾರಣದಿಂದ ಇಂದು ಗೌರಿಯನ್ನು ಪ್ರತಿಷ್ಠಾಪಿಸಿ, ಇಂದೇ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು. ದೇವಿಯ ವಿಸರ್ಜನೆ ಮಾಡುವಾಗ ನಡೆಯುವ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಭಕ್ತಸಾಗರ ನೆರೆದಿತ್ತು.

ಹಲವು ವಿಶೇಷತೆ ಮತ್ತು ವೈಶಿಷ್ಟ್ಯಗಳಿಂದಾಗಿ ರಾಜ್ಯದಲ್ಲೇ ಮಹತ್ವ ಎನಿಸಿರುವ ಮಾಡಾಳು ಗೌರಮ್ಮನ ಜಾತ್ರಾ ಮಹೋತ್ಸವ ಒಂದೇ ದಿನದಲ್ಲಿ ಮುಕ್ತಾಯವಾಯಿತು. ಕೊರೊನಾದ ನಡುವೆಯೂ ಭಕ್ತರು ದರ್ಶನ ಪಡೆದು ಪುನೀತರಾದರು.

Share This Article
Leave a Comment

Leave a Reply

Your email address will not be published. Required fields are marked *