ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮೇಲೆ ಕೊಲೆ ಯತ್ನ ನಡೆದಿದ್ದು, ಈ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಶಿಕುಮಾರ್ ಅವರ ಮೇಲೆ ಜುಲೈ 29 ರಂದು ಕೊಲೆಗೆ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆ ಶಶಿಕುಮಾರ್ ಕೊಲೆಗೆ ಸುಪಾರಿ ನೀಡಿದ್ದ ಪ್ರಮುಖ ಆರೋಪಿ ರವಿಯನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿ ಖಾಸಗಿ ಶಾಲೆಗಳ ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಆರ್ ಟಿಐ ಕಾರ್ಯಕರ್ತನಾಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಾಹ್ಮಣ ವಿರೋಧಿ ಅಂತ ಛತ್ತಿಸ್ಗಢದ ಸಿಎಂ ತಂದೆ ಅರೆಸ್ಟ್
ಕೊಲೆಯ ಉದ್ದೇಶವೇನು?
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಸೆಗೆ ಬಿದ್ದ ಆರೋಪಿ ರವಿ, ಶಶಿಕುಮಾರ್ ಕೊಲೆಗೈದ್ರೆ ಮುಂದಿನ ಕಾರ್ಯದರ್ಶಿ ನಾನೇ ಆಗಬಹುದು ಎನ್ನುವ ಕಾರಣಕ್ಕೆ ಹತ್ಯೆಯ ಸ್ಕೆಚ್ ಹಾಕಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿಯನ್ನು ಸಂಪರ್ಕಿಸಿ ಶಶಿಕುಮಾರ್ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋಳಿ ಪಂದ್ಯ ಪ್ರಕರಣ – ಜೂಜಾಟಕ್ಕೆ ಬ್ರೇಕ್ ಹಾಕಲು ಪೊಲೀಸರ ಹಿಂದೇಟು
ಶಶಿಕುಮಾರ್ ಅವರು ಜಾಲಹಳ್ಳಿಯ ಮುತ್ಯಾಲ ನಗರದಲ್ಲಿ ವಾಸವಾಗಿದ್ದು, ಅವರ ಕೊಲೆಗೆ ಐವರು ಆರೋಪಿಗಳು ಪ್ಲಾನ್ ಮಾಡಿಕೊಂಡಿದ್ದರು. ಈ ಹಿನ್ನೆಲೆ ಆರೋಪಿಗಳು ಆ ಏರಿಯಾದಲ್ಲಿ ಆರು ತಿಂಗಳಿನಿಂದ ಬಾಡಿಗೆ ಮನೆ ಮಾಡ್ಕೊಂಡು ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಕಳೆದ ಜುಲೈ 29 ರ ರಾತ್ರಿ ಮುತ್ಯಾಲನಗರದ ಮನೆ ಬಳಿ ಯಾರು ಇಲ್ಲದಿರುವುದನ್ನು ಗಮನಿಸಿ ಶಶಿಕುಮಾರ್ ಕೊಲೆಗೆ ಯತ್ನಿಸಲಾಗಿತ್ತು.
ಈ ವೇಳೆ ತಕ್ಷಣ ಎಚ್ಚೆದ್ದ ಶಶಿಕುಮಾರ್, ತಮ್ಮ ಬಳಿಯಿದ್ದ ಗನ್ ನಿಂದ ಬೆದರಿಸಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಿಲೀಪ್, ಅಭಿಷೇಕ್, ಕಾರ್ತಿಕ್, ಪವನ್, ಭರತ್ ಎಂಬ ಅರೋಪಿಗಳನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: ಹಳೆ ಬೆಳೆ ಕೊಚ್ಚಿ ಹೋಯ್ತು – ಹೊಸ ಬೆಳೆ ಬಿತ್ತನೆಗೆ ಪರದಾಡುತ್ತಿದ್ದಾರೆ ರೈತರು
ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುವ ವೇಳೆ ಶಶಿಕುಮಾರ್ ಕೊಲೆಗೆ ಸುಪಾರಿ ನೀಡಿದ್ದು, ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಎನ್ನುವುದು ಗೊತ್ತಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ರವಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.


