ರಾಮನಗರ: ರಾಜಕೀಯ ಬದ್ಧ ವಿರೋಧಿಗಳಾದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಡಿ.ಕೆ.ಸುರೇಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ರಾಮನಗರದ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ದಿ.ಕವಿ ಸಿದ್ದಲಿಂಗಯ್ಯ ನವರ ನುಡಿನಮನ ಕಾರ್ಯಕ್ರಮದಲ್ಲಿ ಮೂರು ಪಕ್ಷದ ನಾಯಕರು ವೇದಿಕೆ ಹಂಚಿಕೊಂಡರು. ವೇದಿಕೆ ಮೇಲಿದ್ದ ಕುಳಿತಿದ್ದ ಸಿ.ಪಿ.ಯೋಗೇಶ್ವರ್ ಮತ್ತು ಡಿ.ಕೆ.ಸುರೇಶ್ ನಗುತ್ತಲೇ ಮಾತಾಡೋದು ಕಂಡು ಬಂತು. ಇತ್ತ ಕುಮಾರಸ್ವಾಮಿ ಅವರನ್ನ ನೋಡಿದ ಯೋಗೇಶ್ವರ್ ಕಣ್ಸನ್ನೆ ಮಾಡಿ ಕಿರುನಗೆ ಬೀರಿದರು. ಯೋಗೇಶ್ವರ್ ರಿಯಾಕ್ಷನ್ ಕಂಡು ಡಿ.ಕೆ.ಸುರೇಶ್ ಸಹ ಮುಗಳ್ನಕ್ಕರು.
ಯೋಗೇಶ್ವರ್ ಮೇಲಿನ ಸಿಟ್ಟನ್ನು ಕಾರ್ಯಕ್ರಮದ ಆಯೋಜಕರ ಮೇಲೆ ತೋರಿದ ಹೆಚ್.ಡಿ.ಕುಮಾರಸ್ವಾಮಿ, ಬೇಗ ಬೇಗ ಕಾರ್ಯಕ್ರಮ ನಡೆಸಿ, ಕೆಲಸವಿಲ್ಲದೇ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಒಟ್ಟಿನಲ್ಲಿ ಮೂವರು ನಾಯಕರನ್ನು ಒಂದೇ ವೇದಿಕೆಯಲ್ಲಿ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸಿದರು.

 
			
 
		 
		 
		 
		 
                                
                              
		