ಮೈಸೂರು ವಿವಿ ಕುಲಸಚಿವರ ಆದೇಶ ಕಾನೂನು ಬಾಹಿರ: ಡಿಕೆಶಿ

Public TV
2 Min Read

ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣದ ತನಿಖೆಗೆ ಕಾಂಗ್ರೆಸ್ ಸತ್ಯ ಶೋಧನ ಸಮಿತಿ ರಚಿಸಿತ್ತು. ಈಗ ರೇವಣ್ಣ, ಉಗ್ರಪ್ಪ ನನ್ನನ್ನ ಭೇಟಿ ಮಾಡಿದ್ದಾರೆ. ಪ್ರಾಥಮಿಕ ವಿಚಾರ ಹಂಚಿಕೊಂಡಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಮೈಸೂರು ವಿವಿ ಕುಲಸಚಿವರು, ಕ್ಯಾಂಪಸ್ ಒಳಗಡೆ ಆರು ಗಂಟೆ ನಂತರ ಯಾರು ಓಡಾಡದಂತೆ ಆದೇಶ ಹೊರಡಿಸಿದ್ರು ಇದೊಂದು ಅವೈಜ್ಞಾನಿಕ ಮತ್ತು ಕಾನೂನು ಬಾಹಿರ ನಿಯಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದರೆ, ಅವರನ್ನು ಅಭಿನಂದಿಸುತ್ತೇವೆ. ಕೆಟ್ಟ ಕೆಲಸ ಮಾಡಿದ್ದರೆ ಟೀಕೆ ಮಾಡುತ್ತೇವೆ. ಈ ಹಿಂದೆ ಪೊಲೀಸರು ಏನೆಲ್ಲ ಮಾಡಿದ್ದಾರೆ ಅಂತ ನಮಗೂ ಗೊತ್ತಿದೆ. ಯಾವೆಲ್ಲ ಕೇಸ್ ಮುಚ್ಚಿ ಹಾಕಿದ್ರು, ಯಾವೆಲ್ಲ ಕೇಸ್ ನಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸಿದ್ರು. ಈಗ ಎಷ್ಟರ ಮಟ್ಟಿಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸುತ್ತಾರೆ ನೋಡೋಣ ಎಂದರು.ಇದನ್ನೂ ಓದಿ: ವಿವಾದಕ್ಕೀಡಾಯ್ತು ಮೈಸೂರು ವಿವಿ ಹೊರಡಿಸಿದ ಆದೇಶ

ಮೈಸೂರು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ವಿವಿ ಕುಲಸಚಿವರು ಹೊರಡಿಸಿರುವ ಆದೇಶದ ವಿಚಾರವಾಗಿ ನಾನು ಗರ್ವನರ್ ಜೊತೆಗೆ ಮಾತನಾಡುತ್ತೇನೆ. ಈ ರೀತಿ ಆದೇಶ ಹೊರಡಿಸಿರುವುದರ ಹಿಂದೆ ಹೋಮ್ ಮಿನಿಸ್ಟರ್ ಅಥವಾ ಕಮಿಷನರ್ ಅವರ ತಪ್ಪಿದ್ಯಾ ಎಂದು ಕೇಳುತ್ತೇನೆ. ರಾತ್ರಿ ಹೊತ್ತು ಹೆಣ್ಣು ಮಕ್ಕಳು ಓಡಾಡಬೇಡಿ ಅಂದ್ರೆ ಹೇಗೆ? ರಕ್ಷಣೆ ಕೊಡಬೇಕಾಗಿದ್ದು ಪೊಲೀಸರ ಕೆಲಸ. ಮೈಸೂರು ಪ್ರವಾಸಿ ತಾಣವಾಗಿರುವುದರಿಂದಾಗಿ ಸಾಕಷ್ಟು ಕಡೆಯಿಂದ ಮೈಸೂರಿಗೆ ಜನಗಳು ಬರುತ್ತಾರೆ. ಅವರನ್ನು ಓಡಾಡಬೇಡಿ ಅಂದ್ರೆ ಹೇಗೆ? ಆದೇಶ ಹೊರಡಿಸಿರುವ ಕುಲಸಚಿವರ ನೇಮಕಾತಿ ರದ್ದು ಮಾಡಬೇಕು. ಅವರನ್ನು ಕೂಡಲೇ ಮನೆಗೆ ಕಳುಹಿಸಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್- ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

ಗಣೇಶ ಹಬ್ಬಕ್ಕೆ ನಿರ್ಬಂಧದ ಬಗ್ಗೆ ಮಾತನಾಡಿ, ನಾವೆಲ್ಲಾ ಗಣೇಶನ ಆರಾಧಕರು. ವಿಘ್ನ ವಿನಾಶಕ ಗಣಪ. ಎಲ್ಲರ ಮನೆಯಲ್ಲಿ ಹಬ್ಬ ಮಾಡುತ್ತಾರೆ. ಹಬ್ಬದ ಆಚರಣೆ ಬಗ್ಗೆ ಸರ್ಕಾರದ ಮಾರ್ಗಸೂಚಿ ಬರಲಿ ಬಳಿಕ ನಮ್ಮ ಪಕ್ಷದ ನಿಲುವು ತಿಳಿಸುತ್ತೇವೆ ಎಂದರು. ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

ಆದೇಶ ವಾಪಸ್:
ಸಂಜೆ 6.30ರ ನಂತರ ಮಾನಸಗಂಗೋತ್ರಿ ಆವರಣ, ಕುಕ್ಕರಹಳ್ಳಿಕೆರೆ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೆ ನಿರ್ಬಂಧ  ಹೇರಿ ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿರುವುದರ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರ ಸೂಚನೆ ಮೇರೆಗೆ ವಿವಿ ಕುಲಸಚಿವರು ಆದೇಶ ವಾಪಸ್ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *