ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ: ಎಸ್.ಟಿ.ಸೋಮಶೇಖರ್

Public TV
1 Min Read

ಮೈಸೂರು: ಗುರಿ ಈಡೇರಿಸಿಕೊಳ್ಳುವ ಕಡೆಗೆ ಪ್ರಯತ್ನ ನಿರಂತರವಾಗಿರಲಿ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ದೀರ್ಘಕಾಲದ ನಂತರ 9, 10ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜು ಭೌತಿಕ ತರಗತಿಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಬುಧವಾರ ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿ ಶುಭಕೋರಿದರು. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿ ಸಂಯುಕ್ತ ಕಾಲೇಜಿಗೆ ಭೇಟಿ ನೀಡಿದಾಗ, ಭೌತಿಕ ತರಗತಿಗಳು ಆರಂಭವಾಗಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿನಿಯರು ಸಚಿವರಿಗೆ ಹೇಳಿದರು.

ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಆಶೋತ್ತರಗಳ ಬಗ್ಗೆ ಸಚಿವರು ವಿಚಾರಿಸಿದರು. ರಾಜಕಾರಣಿ ಆಗುವ ಬಯಕೆ ಯಾರಿಗಾದರೂ ಇದಿಯ ಎಂದು ಸಚಿವರು ಕೇಳಿದಾಗ ವಿದ್ಯಾರ್ಥಿಗಳು ನಕ್ಕು ಅಸಮ್ಮತಿ ತೋರಿದರು. ಇಂಜಿನಿಯರ್, ವೈದ್ಯ, ಐ.ಎ.ಎಸ್, ಐ.ಪಿ.ಎಸ್ ಆಗುವ ಬಗ್ಗೆ ಕೇಳಿದಾಗ ಹಲವರು ಕೈ ಮೇಲೆ ಎತ್ತಿ ತಮ್ಮ ಗುರಿ, ಬಯಕೆ ವ್ಯಕ್ತಪಡಿಸಿದರು. ತಮ್ಮ ಗುರಿ ಈಡೇರಿಸಿಕೊಳ್ಳುವ ಕಡೆಗೆ ತಮ್ಮ ಪ್ರಯತ್ನ ನಿರಂತರವಾಗಿರಲಿ ಎಂದು ಸಚಿವರು ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *