ಕೋವಿಡ್‍ಗೆ ಹೆದರಿ ಆತ್ಮಹತ್ಯೆ ಮಾಡ್ಕೊಂಡ ದಂಪತಿಯ ಕೊರೊನಾ ವರದಿ ನೆಗೆಟಿವ್

Public TV
2 Min Read

– ಹಿಂದೂ ಸಂಘಟನೆಗಳ ಮುಖಂಡರಿಗೆ ವಾಯ್ಸ್ ಮೆಸೇಜ್
– ವಿಳಾಸ ಪತ್ತೆ ಹಚ್ಚಲು ಹರಸಾಹಸ ಪಟ್ಟ ಪೊಲೀಸ್ ಕಮೀಷನರ್
– ಮದ್ವೆಯಾಗಿ 21 ವರ್ಷವಾದ್ರೂ ಮಕ್ಕಳಾಗಿರಲಿಲ್ಲ

ಮಂಗಳೂರು: ಸೂರ್ಯ ಉದಯಿಸುವ ಮುನ್ನವೇ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್‍ಗೆ ಬಂದ ದೂರವಾಣಿ ಕರೆ ಸಾವಿನ ಆತಂಕವನ್ನು ತಂದಿದೆ.ಮಂಗಳೂರು ನಗರ ಹೊರವಲಯದ ಚಿತ್ರಾಪುರದ ರೆಹೆಜಾ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ರಮೇಶ್ ಹಾಗೂ ಗುಣ ಸುವರ್ಣ ದಂಪತಿ ಸಾವಿಗೆ ಶರಣಾಗುವ ಮುನ್ನ ಕಮೀಷನರ್ ಶಶಿಕುಮಾರ್‍ಗೆ ಕರೆ ಮಾಡಿದ್ದಾರೆ.

ರಮೇಶ್ ಪತ್ನಿ ಗುಣ ಸುವರ್ಣ ತೀವ್ರ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು,ವಾರದ ಹಿಂದೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಆರೋಗ್ಯ ತೀವ್ರ ಹದಗೆಟ್ಟಿದಾಗ,ಬ್ಲಾಕ್ ಫಂಗಸ್ ಅಂಟಿಕೊಳ್ಳುವ ಭೀತಿಯಿಂದ ನೇಣಿಗೆ ಕೊರಳೊಡ್ಡಿದ್ದಾರೆ. ಇತ್ತ ಪತ್ನಿ ಸಾಯುತ್ತಿದ್ದಂತೆಯೇ, ಜೀವನದ ಆಸೆಯನ್ನೇ ಕೈ ಚೆಲ್ಲಿದ ಪತಿ ರಮೇಶ್ ಸಾಯುವ ನಿರ್ಧಾರ ಮಾಡಿದ್ದಾರೆ. ಸಾಯುವ ಮುನ್ನ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್‍ಗೆ  ಕರೆ ಮಾಡಿ ಸಾಯುತ್ತಿರುವ ಬಗ್ಗೆ ಹೇಳಿದ್ದಾರೆ. ಅಲ್ಲದೇ ವಾಯ್ಸ್ ಮೆಸೇಜ್ ಕಳುಹಿಸಿ ತನ್ನ ಅಂತ್ಯಕ್ರಿಯೆಯನ್ನು ಹಿಂದೂ ಸಂಘಟನೆಗಳ ಮುಖಂಡರಾದ ಶರಣ್ ಪಂಪ್ ವೆಲ್ ಅಥವಾ ಸತ್ಯಜಿತ್ ಸುರತ್ಕಲ್ ನೇತೃತ್ವದ ತಂಡ ಹಿಂದೂ ಧಾರ್ಮಿಕ ವಿಧಿ ವಿಧಾನದ ಮೂಲಕ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ರಮೇಶ್ ಮೆಸೇಜ್ ನೋಡಿದ ಕಮೀಷನರ್ ಎನ್ ಶಶಿಕುಮಾರ್ ಕೂಡಲೇ ಆತನ ವಿಳಾಸ ಪತ್ತೆ ಹಚ್ಚಿ, ಪೊಲೀಸರನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ದಂಪತಿ ನೇಣಿಗೆ ಶರಣಾದ್ದಾರೆ.

ರಮೇಶ್ ಸುವರ್ಣ ಕರೆ ಮಾಡಿದ ಸಂಧರ್ಭದಲ್ಲಿ ವಿಳಾಸ ಹೇಳದಿದ್ದರಿಂದ ವಿಳಾಸ ಪತ್ತೆ ಹಚ್ಚೋದೇ ಪೊಲೀಸರಿಗೆ ಸವಾಲಾಗಿತ್ತು. ಪೊಲೀಸ್ ಕಮೀಷನರ್ ಮಂಗಳೂರಿನ ಹಲವು ವಾಟ್ಸಪ್ ಗ್ರೂಪ್ ಗಳಿಗೆ ಆಡಿಯೋ ಮೆಸೇಜ್ ಹಾಕಿ ದಂಪತಿಯ ಪರಿಚಯ ಇದ್ದವರು ಕೂಡಲೇ ಪತ್ತೆ ಹಚ್ಚಿ ಅಂತಾ ಮನವಿ ಮಾಡಿದ್ದರು. ಪೊಲೀಸರ ಜೊತೆ ಸ್ಥಳೀಯರೂ ದಂಪತಿ ಮನೆಗೆ ಬಂದಾಗ ದಂಪತಿ ಇಹ ಲೋಕ ತ್ಯಜಿಸಿದ್ದರು. ಇದನ್ನೂ ಓದಿ:  ಕೊರೊನಾದಿಂದ ಆರೋಗ್ಯ ಸ್ಥಿತಿ ಗಂಭೀರ- ದಂಪತಿ ಆತ್ಮಹತ್ಯೆ

ದಂಪತಿ ಸಾಯುವ ಮುನ್ನ ಡೆತ್ ನೋಟ್ ಕೂಡಾ ಬರೆದಿದ್ದಾರೆ. ರಮೇಶ್ ಮತ್ತು ಗುಣ ಸುವರ್ಣ ದಾಂಪತ್ಯ ಜೀವನಕ್ಕೆ ಕಾಲಿರಿಸಿ 21 ವರ್ಷಗಳಾದರೂ ಸಂತಾನ ಭಾಗ್ಯ ಕರುಣಿಸಿರಲಿಲ್ಲ. ಎರಡು ಸಲ ಗರ್ಭಿಣಿಯಾದರೂ ಮಧುಮೇಹ ದಿಂದ ಮಗುವಾಗಿರಲಿಲ್ಲ.ಇದೇ ಕೊರಗಿನಲ್ಲಿ ದಂಪತಿ ಯಾರ ಜೊತೆಯ ಸೇರುತ್ತಿರಲಿಲ್ಲ. ಇಂದು ಸಾವನ್ನಪ್ಪುವ ವೇಳೆಯಲ್ಲೂ ಕುಟುಂಬದವರಿಗೆ ವಾಯ್ಸ್ ಮೆಸೇಜ್ ಮಾಡಿದ ಪತಿ ರಮೇಶ್,ಆತ್ಮಹತ್ಯೆ ಮಾಡುತ್ತಿರೋದರ ಬಗ್ಗೆ ಕ್ಷಮೆ ಕೇಳಿದ್ದಾರೆ. ಅಲ್ಲದೇ ಡೆತ್ ನೋಟ್ ಜೊತೆಗೆ ಒಂದು ಲಕ್ಷ ರೂಪಾಯಿ ಇಟ್ಟು ಅಂತ್ಯಕ್ರಿಯೆ, ಅಂತ್ಯ ಸಂಸ್ಕಾರಕ್ಕೆ ಉಪಯೋಗಿಸುವಂತೆ ಕೇಳಿಕೊಂಡಿದ್ದಾರೆ. ದಂಪತಿ ಇಚ್ಛೆಯಂತೆ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ತಂಡ ದಂಪತಿಯ ಅಂತ್ಯ ಸಂಸ್ಕಾರ ಮಾಡಿದೆ

ಕೊರೊನಾ ಆತಂಕದಿಂದ ಸಾವನ್ನಪ್ಪಿದ ದಂಪತಿಯ ಮರಣೋತ್ತರ ಪರೀಕ್ಷೆ ನಡೆಸುವ ಮುನ್ನ ನಡೆಸಲಾದ ಕೊರೊನಾ ಪರೀಕ್ಷೆಯಲ್ಲಿ ದಂಪತಿ ಗಳ ವರದಿ ಕೊರೊನಾ ನೆಗೆಟಿವ್ ಬಂದಿದೆ. ಅರೆಕ್ಷಣದ ನಿರ್ಧಾರ ದಂಪತಿಯ ಬಾಳನ್ನು ಕೊನೆಗಾಣಿಸಿದ್ದು, ಅಮೂಲ್ಯ ಜೀವವನ್ನು ಹಾಳುಮಾಡಬೇಡಿ ಅಂತಾ ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *