ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು, ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ

Public TV
2 Min Read

– ನದಿ ತೀರದಲ್ಲಿ ಪ್ರವಾಹದ ಆತಂಕ

ಯಾದಗಿರಿ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆಯಾಗಿದ್ದು, ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಆತಂಕ ಉಂಟಾಗಿದೆ. ಇತ್ತ ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ.

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರದಿಂದ 20 ಗೇಟ್ ಗಳ ಮೂಲಕ ಕೃಷ್ಣಾ ನದಿಗೆ 1,29,640 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯಕ್ಕೆ 1,20,000 ಕ್ಯೂಸೆಕ್ಸ್ ಒಳಹರಿವಿದೆ. ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಜಿಲ್ಲೆಯ ಎಲ್ಲಾ ತಹಶಿಲ್ದಾರರು ಕೇಂದ್ರ ಸ್ಥಾನದಲ್ಲಿರಲು ಸೂಚನೆ ನೀಡಿರುವ ಜಿಲ್ಲಾಡಳಿತ, ಪ್ರವಾಹ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡಿದೆ. ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ಮುನ್ನೆಚರಿಕೆ ಕ್ರಮವಾಗಿ ಮೈಕ್ ಮೂಲಕ ಹಾಗೂ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ. ಗ್ರಾಮದ ಜನ-ಜಾನುವಾರುಗಳು ನದಿಯ ದಡಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ
ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಹತ್ತಿಕುಣಿ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರ ಹರಿದು ಬರುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಉತ್ತಮವಾಗಿರುವ ಹಿನ್ನೆಲೆ ಹಸಿರು ಬೆಟ್ಟಗಳ ಮಧ್ಯೆ ಇರುವ ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯ ಭರ್ತಿಯಾಗುತ್ತಿದೆ. ನೀರು ಬಿಡಲು ಕ್ಷಣಗಣನೆ ಆರಂಭವಾಗಿದ್ದು, ಜನ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಜಲಾಶಯ ಭರ್ತಿ ರೈತರಲ್ಲಿ ಸಂತಸ ಮೂಡಿದೆ.

ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪೂರ, ದಸರಾಬಾದ್ ಗ್ರಾಮಗಳ ಒಟ್ಟು 53 ಎಕರೆ ಜಮೀನಿಗೆ ಈ ಡ್ಯಾಂ ನೀರನ್ನು ಬಳಸಿಕೊಳ್ಳಬಹುದಾಗಿದೆ. ರೈತರು ಭತ್ತ, ಶೇಂಗಾ, ಹತ್ತಿ, ಜೋಳ, ಸಜ್ಜೆ, ಇನ್ನಿತರ ಬೆಳೆಗಳನ್ನು ಬೆಳೆಯಲು ಈ ಡ್ಯಾಂ ಬಹಳಷ್ಟು ಸಹಕಾರಿಯಾಗುತ್ತದೆ. ಒಟ್ಟು 0.352 ಟಿಎಮ್‍ಸಿ ನೀರು ಸಂಗ್ರಹ ಸಾಮಾಥ್ರ್ಯ ಹೊಂದಿರುವ ಜಲಾಶಯದಲ್ಲಿ ಈಗಾಗಲೇ 0.305 ಟಿಎಮ್‍ಸಿ ನೀರು ಸಂಗ್ರಹವಿದೆ. ಹೆಚ್ಚು ನೀರು ಹರಿದು ಬಂದರೆ ಜಲಾಶಯದ ಗೇಟ್‍ಗಳನ್ನು ತೆರೆಯಲು ನೀರಾವರಿ ಇಂಜಿನೀಯರ್ ಸೇರಿದಂತೆ ಸಿಬ್ಬಂದಿ ಸ್ಥಳದಲ್ಲಿ ಠಿಕಾಣಿ ಹಾಕಿದ್ದಾರೆ.

ಜಲಾಶಯ ಭರ್ತಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹತ್ತಿಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಹಾಗೂ ರೈತರು ಬೆಳಗ್ಗೆಯಿಂದಲೇ ಜಲಾಶಯಕ್ಕೆ ಆಗಮಿಸಿ, ಜಲಾಶಯ ವೀಕ್ಷಿಸಿ, ನಿಸರ್ಗದ ಸೌಂದರ್ಯವನ್ನು ಸವಿಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *