ಆಗಸ್ಟ್‌ನಲ್ಲಿ ಪರೀಕ್ಷೆಗೆ ಅವಕಾಶ – ಕೊರಟಗೆರೆ ವಿದ್ಯಾರ್ಥಿನಿಗೆ ಸುರೇಶ್ ಕುಮಾರ್ ಭರವಸೆ

Public TV
2 Min Read

ಬೆಂಗಳೂರು: ಕೊರಟಗೆರೆ ತಾಲೂಕಿನ ವಿದ್ಯಾರ್ಥಿನಿ ಗ್ರೀಷ್ಮಾ ಎನ್. ನಾಯಕ್‍ಗೆ ಆಗಸ್ಟ್ ನಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

ಶನಿವಾರ ಮುಂಜಾನೆಯೇ ಕೊರಟಗೆರೆ ತಾಲೂಕಿನ ಹನುಮಂತಾಪುರ ಗ್ರಾಮದ ಗ್ರೀಷ್ಮಾ ಎನ್. ನಾಯಕ್ ಮನೆಗೆ ಭೇಟಿ ನೀಡಿದ ಸಚಿವರು, ಗ್ರೀಷ್ಮಾ ನಾಯಕ್ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹೆಸರು ನೊಂದಾಯಿಸಿದಲ್ಲವಾದ್ದರಿಂದ ನಿಯಮಾನುಸಾರ ಜುಲೈನಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಮುಂದಿನ ತಿಂಗಳು ನಡೆಯಲಿರುವ ಪೂರಕ ಪರೀಕ್ಷೆಗೆ ಹಾಜರಾಗಲು ಆಕೆಗೆ ಖಚಿತ ಅವಕಾಶ ನೀಡಿ ಉತ್ತೀರ್ಣಗೊಳಿಸುವುದಲ್ಲದೇ ಪಿಯು ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಸದರಿ ವಿದ್ಯಾರ್ಥಿನಿ ಪೂರಕ ಪರೀಕ್ಷೆಗೆ ಹಾಜರಾಗಲು ಪರೀಕ್ಷೆಗೆ ಹೆಸರು ನೊಂದಾಯಿಸುವುದು, ಫಲಿತಾಂಶದ ನಂತರ ಇದೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿನಿಗೆ ಪಿಯುಸಿ ತರಗತಿಗೆ ಸೇರ್ಪಡೆಗೊಳಿಸುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ಮಧುಗಿರಿ ಡಿಡಿಪಿಐಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದನ್ನೂ ಓದಿ: ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ – ಮೂಳೆಗಳನ್ನ ಎಳೆದಾಡಿದ ನಾಯಿಗಳು -ಗ್ರಾಮಸ್ಥರಲ್ಲಿ ಆತಂಕ

ಇದೇ ಸಾಲಿನಲ್ಲಿ ನಿನ್ನನ್ನು ಪಿಯುಸಿಗೆ ಸೇರ್ಪಡೆಗೊಳಿಸುವುದು ನಾನು ಜವಾಬ್ದಾರಿ. ಮುಂದಿನ ತಿಂಗಳು ನಡೆಯಲಿರುವ ಪರೀಕ್ಷೆ ಹಾಜರಾಗಲು ಅವಕಾಶವಿರುವುದರಿಂದ ಯಾವುದೇ ಕಾರಣಕ್ಕೂ ಮನಸ್ಸಿಗೆ ಬೇಸರ ಮಾಡಿಕೊಳ್ಳದೇ ಉತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಿ ಅಭ್ಯಾಸದ ಕಡೆ ಗಮನ ಹರಿಸಬೇಕು. ಪರೀಕ್ಷೆಗೆ ಚೆನ್ನಾಗಿ ಓದುವುದಷ್ಟೇ ನೀನು ಮಾಡಬೇಕಾದ ಕೆಲಸ ಎಂದು ಸುರೇಶ್ ಕುಮಾರ್ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿ ಅವಳಲ್ಲಿ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಪೋಷಕರು ಹಾಜರಿದ್ದು, ಸಚಿವರು ತಮ್ಮ ಮನೆವರೆಗೂ ಆಗಮಿಸಿ ತಮ್ಮ ಪುತ್ರಿಗೆ ಧೈರ್ಯ ತುಂಬಿ ಭರವಸೆ ಮೂಡಿಸಿದ ಸಚಿವರಿಗೆ ಕೃತಜ್ಞಗೆ ಸಲ್ಲಿಸಿದರು.

ವಿದ್ಯಾರ್ಥಿನಿ ಪರೀಕ್ಷೆಗೆ ಹೆಸರು ನೊಂದಾಯಿಸಿಲ್ಲ:
ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಗ್ರೀಷ್ಮಾ 9ನೇ ತರಗತಿ ಪಾಸಾದ ನಂತರ ಅವಳು ಶಾಲೆಗೆ ಹಾಜರಾಗಿಲ್ಲ, ಹಾಗೆಯೇ 10ನೇ ತರಗತಿ ಪರೀಕ್ಷೆ ನೊಂದಾಯಿಸಿಲ್ಲ. ಹಾಗಾಗಿ ಅವಳಿಗೆ ಜುಲೈನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶವಾಗಿಲ್ಲ. ಆಗಸ್ಟ್ ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗೆ ಹೆಸರು ನೊಂದಾಯಿಸಿ ಗ್ರೀಷ್ಮಾಗೆ ಅವಕಾಶ ನೀಡಲಾಗುವುದು ಎಂದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಭಾಗದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೊಂದಾಯಿಸಿದ್ದರೂ, ಕೊನೆ ಕ್ಷಣದವರೆಗೂ ಮಂಡಳಿಗೆ ಶಾಲಾ ಮುಖ್ಯೋಪಾಧ್ಯಾಯರ ಮೂಲಕ ಅವರ ಭಾವಚಿತ್ರವನ್ನು ನೀಡಿಲ್ಲ. ಭಾವಚಿತ್ರ ಒದಗಿಸುವುದು ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದು, ಫೋಟೋ ಒದಗಿಸದೇ ಇರುವುದರಿಂದ ಅವರಿಗೆ ಪ್ರವೇಶ ಪತ್ರಗಳು ಲಭ್ಯವಾಗಿಲ್ಲ. ಆ ಇಬ್ಬರೂ ವಿದ್ಯಾರ್ಥಿಗಳೊಂದಿಗೆ ಮತ್ತು ಸ್ಥಳೀಯ ಮುಖ್ಯೋಪಾಧ್ಯಾಯರೊಂದಿಗೆ ಮಾತನಾಡಿ ಎಲ್ಲ ವಿಷಯಗಳನ್ನೂ ಅರಿತುಕೊಂಡಿದ್ದೇನೆ. ಆ ಇಬ್ಬರು ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಪೂರಕ ಪರೀಕ್ಷೆಯಲ್ಲಿ ಭಾಗವಹಿಸಿದ ಮಕ್ಕಳಿಗೂ ಜುಲೈ ಪರೀಕ್ಷೆಯಂತೆಯೇ ಹೊಸ ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿಯನ್ನೇ ನೀಡಲಾಗುವುದು ಎಂದೂ ಸಚಿವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *