– ಭ್ರಷ್ಟಾಚಾರಿಗಳ ಚಳಿ ಬಿಡಿಸಿದ ಅಧಿಕಾರಿಗಳು
ಬೀದರ್: ಬೆಳ್ಳಂಬೆಳಗ್ಗೆ ಬೀದರ್, ತುಮಕೂರು, ದಾವಣಗೆರೆಯಲ್ಲಿ ಎಸಿಬಿ ಭ್ರಷ್ಟಾಚಾರ ಆರೋಪ ಬಂದ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದೆ.
ದಾವಣಗೆರೆಯ ಯೋಜನಾ ನಿರ್ದೇಶಕ ಎಚ್.ಆರ್.ಕೃಷ್ಣಪ್ಪ ಹಾಗೂ ತುಮಕೂರಿನ ಆರ್.ಟಿ.ಓ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಶಿವಾಜಿ ನಗರದ ನಿವಾಸ, ಭಾಲ್ಕಿ ತಾಲೂಕಿನ ಮೇಹಕರ್ ನ ನಿವಾಸ ಹಾಗೂ ಮೇಹಕರ್ ಗ್ರಾಮದ ಪೆಟ್ರೋಲ್ ಪಂಪ್ ಸೇರಿದಂತೆ ಏಕ ಕಾಲಕ್ಕೆ ಮೂರು ಕಡೆ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಬಸವಕಲ್ಯಾಣ ವಿಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಿರಿಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್ ಮೋರೆ ನಿವಾಸದಲ್ಲಿ ಮೇಲೆ ದಾಳಿಯಾಗಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆ ಬೀದರ್ ಎಸಿಬಿ ಪೊಲೀಸರು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಎಸಿಬಿ ಎಸ್‍ಪಿ ಮಹೇಶ್ ಮಘಣ್ಣನವರ್ ಮಾರ್ಗದರ್ಶನದಲ್ಲಿ ಎಸಿಬಿ ದಾಳಿ ಮಾಡಲಾಗಿದೆ.
ದಾವಣಗೆರೆ: ಕೋಲಾರ ಜಿಲ್ಲೆಯ ಮಾಲೂರು ನಗರ ಸಭೆಯ ಯೋಜನಾ ನಿರ್ದೇಶಕ ಎಚ್.ಆರ್. ಕೃಷ್ಣಪ್ಪನವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಇವರ ಸ್ವ ಗ್ರಾಮವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ, ಕೋಲಾರ ಜಿಲ್ಲೆಯ ಮಾಲೂರು ಮನೆ ಮತ್ತು ಕಚೇರಿ, ಶಿವಮೊಗ್ಗ ಜಿಲ್ಲೆಯ ಮನೆ, ಬೆಂಗಳೂರಿನ ವಿಜಯನಗರದಲ್ಲಿ ಸೇರಿ ಐದು ಕಡೆ ಏಕ ಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಹಾಗೂ ಆಸ್ತಿ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾವಣಗೆರೆ ಎಸಿಬಿ ಎಸ್‍ಪಿ ಜಯಪ್ರಕಾಶ್ ನೇತೃತ್ವದ ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ತುಮಕೂರು: ಬೆಂಗಳೂರು ಆರ್.ಟಿ.ಓ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಅವರ ಕೊರಟಗೆರೆಯಲ್ಲಿರುವ ಮನೆ ಮೇಲೂ ಎಸಿಬಿ ದಾಳಿ ನಡೆಸಿದ್ದಾರೆ. ಕೊರಟಗೆರೆ ತಾಲೂಕಿನ ದೇವರಹಳ್ಳಿಯಲ್ಲಿರುವ ಫಾರಂ ಹೌಸ್ ಮೇಲೆ ಹತ್ತಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಬೆಳಗಿನ ಜಾವ ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಎಸಿಬಿ ತಂಡದಿಂದ ಫಾರಂ ಹೌಸ್ ನಲ್ಲಿ ಪರಿಶೀಲನೆ ಮುಂದುವರೆದಿದೆ. ಸುಮಾರು 10 ಎಕರೆ ಜಮೀನು ಖರೀದಿಸಿ ಐಷಾರಾಮಿ ಫಾರಂ ಹೌಸ್ ನಿರ್ಮಿಸುತ್ತಿದ್ದರು. ಇದನ್ನೂ ಓದಿ: ಹೇಮಾವತಿ ಒಳ ಹರಿವು ಹೆಚ್ಚಳ – ಯಗಚಿ ಜಲಾಶಯ ಭರ್ತಿ