ಸ್ವಾಭಿಮಾನಿ ಪಕ್ಷ ಸ್ಥಾಪಿಸ್ತಾರಾ ಸಂಸದೆ ಸುಮಲತಾ ಅಂಬರೀಶ್..?

Public TV
2 Min Read

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೊಸ ಪ್ರಾದೇಶಿಕ ಪಕ್ಷ ಕಟ್ತಾರಾ ಅನ್ನೋ ಗುಮಾನಿಯೊಂದು ಎದ್ದಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ ಜಿದ್ದು ಪಕ್ಷ ಕಟ್ಟುವ ನಿರ್ಧಾರವಾಗಿ ಬದಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಮಂಡ್ಯ ಗಣಿ ಗಲಾಟೆಯಲ್ಲೂ ಹೊಸ ಪ್ರಾದೇಶಿಕ ಪಕ್ಷದ ರಚನೆ ಕೇಳಿ ಬಂದಿದೆ. ಗಣಿ ಗದ್ದಲದ ಸದ್ದಿನ ನಡುವೆ ಪ್ರಾದೇಶಿಕ ಪಕ್ಷ ಹುಟ್ಟುಹಾಕುವ ವಿಚಾರ ಮುನ್ನೆಲೆಗೆ ಬಂದಿದೆ. ಸುಮಲತಾ ಗಣಿ ಹೋರಾಟಕ್ಕೆ ಅಂಬರೀಶ್ ಅಭಿಮಾನಿಗಳು ಸಾಥ್ ನಿಡಿದ್ದಾರೆ. ಸಂಸದೆ ಎದುರು ಅಂಬರೀಷ್ ಅಭಿಮಾನಿಗಳು ಪಕ್ಷ ಆರಂಭಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಸ್ವಾಭಿಮಾನಿ ಪ್ರಾದೇಶಿಕ ಪಕ್ಷ ಕಟ್ಟುವಂತೆ ಒತ್ತಾಯಿಸುತ್ತಿದ್ದಾರೆ. ಅಂಬಿ ಅಭಿಮಾನಿಗಳ ಒತ್ತಾಯಕ್ಕೆ ಸುಮಲತಾ ಅವರು ಮಣಿಯುತ್ತಾರಾ..?, ಹೊಸದೊಂದು ಪ್ರಾದೇಶಿಕ ಪಕ್ಷವನ್ನು ಕಟ್ಟುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇತ್ತ ಸುಮಲತಾ ಮನಸಲ್ಲೂ ಇಂಥದ್ದೊಂದು ಆಲೋಚನೆ ಬಂದಿರಬಹುದಾ ಎಂಬ ಕುತೂಹಲಕ್ಕೆ ಕಾರಣ ಮೊನ್ನೆ ಸುಮಲತಾ ನೀಡಿರುವ ಹೇಳಿಕೆ. ಇತ್ತೀಚೆಗೆ ಮಂಡ್ಯದ ಲಕ್ಷಾಂತರ ಜನ, ಅಂಬಿ, ದರ್ಶನ್, ಯಶ್ ಅಭಿಮಾನಿಗಳ ಸಪೋರ್ಟ್ ಇದೆ ಅಂತ ಸುಮಲತಾ ಹೇಳಿದ್ದರು. ಈ ಹೇಳಿಕೆ ಮೂಲಕ ಪಕ್ಷ ಕಟ್ಟೋ ಸುಳಿವು ಕೊಟ್ರಾ ಸಂಸದೆ ಸುಮಲತಾ ಎಂಬ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಏನಮ್ಮ ನಿಮ್ಮಿಬ್ಬರ ಮಧ್ಯೆ ಜಟಾಪಟಿ ಜೋರಾಗಿದೆ- ಸುಮಲತಾಗೆ ಸಿದ್ದರಾಮಯ್ಯ ಪ್ರಶ್ನೆ

ಸದ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾರಿಗೆ ಭರಪೂರ ಬೆಂಬಲವೂ ಸಿಗುತ್ತಿದೆ. ಹೀಗಾಗಿ ಹೆಚ್‍ಡಿಕೆ ವಿರುದ್ಧದ ಜಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವೇ ಹೊಸ ಪಕ್ಷಕ್ಕೆ ನಾಂದಿ ಹಾಡುತ್ತಾ..?, ಅದರಲ್ಲೂ ಸುಮಲತಾ ಅವರ ಹೋರಾಟದ ಜಿದ್ದು ಪಕ್ಷ ಕಟ್ಟೋವರೆಗೂ ಎಳೆದೊಯ್ಯತ್ತಾ?, ಭವಿಷ್ಯದ ರಾಜಕೀಯದ ಕನಸಿನ ಬೀಜ ಹೊಸ ಪಕ್ಷದ ಮೂಲಕ ಮೊಳೆಯುತ್ತಿದೆಯಾ ಎಂಬ ಹಲವಾರು ಚರ್ಚೆಗಳು ನಡೆಯುತ್ತಿದೆ.

ಹೊಸ ಪಕ್ಷದ ವಿಚಾರದಲ್ಲಿ ಸದ್ಯದ ಸನ್ನಿವೇಶ ಅಪಕ್ವವಾಗಿದೆ. ಆದರೆ ಅಂಥದ್ದೊಂದು ಆಲೋಚನೆ ಸುಮಲತಾ ಮತ್ತು ಅವರ ಬಳಗದಲ್ಲಿ ಇದೆ ಎನ್ನಲಾಗುತ್ತಿದೆ. ಒಂದೊಮ್ಮೆ ಹೊಸ ಪಕ್ಷ ಕಟ್ಟದಿದ್ರೆ ಸುಮಲತಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಕೂಡ ಮೂಡಿದೆ. ಈಗಿನ ಹೋರಾಟ ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದು ಪಕ್ಷೇತರರಾಗಿರುವುದರಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯಾವುದಾದರೊಂದು ರಾಷ್ಟ್ರೀಯ ಪಕ್ಷ ಸೇರಬಹುದಾ ಸುಮಲತಾ ಎಂಬ ಚರ್ಚೆಯೂ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷ ಸೇರೋ ಪ್ಲಾನ್ ಇಲ್ದಿದ್ರೆ ಬೇರೆ ರಾಜಕೀಯ ಲೆಕ್ಕಾಚಾರ ಏನಾದ್ರೂ ಹೆಣೆಯಬಹುದು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *