ಕಲ್ಲು ಕ್ರಷರ್‌ನಲ್ಲಿ ಬ್ಲಾಸ್ಟ್- ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

Public TV
1 Min Read

ವಿಜಯಪುರ: ಜಲ್ಲಿ ಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಬ್ಲಾಸ್ಟ್ ಆಗಿದ್ದು, ಓರ್ವ ಸಾವನ್ನಪ್ಪಿ, ಇಬ್ಬರಿಗೆ ತೀವ್ರ ಗಾಯಗಾಳಿವೆ.

ವಿಜಯಪುರದ ಅಲಿಯಾಬಾದ್ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು, ಗಾಯಾಳುಗಳು ಸದ್ಯ ಖಾಸಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ 4 ಗಂಟೆ ಸುಮಾರಿಗೆ ಅಶೋಕ್ ಸಾವಳಗಿ ಅವರಿಗೆ ಸೇರಿದ ಜಲ್ಲಿ ಕಲ್ಲು ಕ್ರಷರ್ ನಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಈ ವೇಳೆ ಬೈಕ್ ಮೇಲೆ ಜಮೀನಿನಿಂದ ಅಲಿಯಾಬಾದ್ ಕಡೆಗೆ ತೆರಳುತ್ತಿದ್ದಾಗ ವಾಹನ ಸವಾರರಾದ ಮೋಹನ್, ಗಿರೀಶ್, ಸಚಿನ್ ಅವರಿಗೆ ಬ್ಲಾಸ್ಟ್‍ನ ಕಲ್ಲುಗಳು ಸಿಡಿದಿವೆ. ಇದನ್ನೂ ಓದಿ: ಅಪಘಾತವಾಗಿ ನರಳಾಡುತ್ತಿದ್ದ ಗಾಯಾಳು- ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಡಿಕೆಶಿ

ಬ್ಲಾಸ್ಟ್ ನಿಂದ ಸಿಡಿದ ಕಲ್ಲು ಮೋಹನ್ ತಲೆ, ಕಾಲಿಗೆ ಸಿಡಿದಿದೆ. ಇದರಿಂದ ಮೋಹನ್ ತೀವ್ರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಮೃತಪಟ್ಟಿದ್ದಾರೆ. ಸಚಿನ್ ಹಾಗೂ ಗಿರೀಶ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್‍ಪಿ ಅನುಪಮ್ ಅಗರ್‍ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ರಷರ್ ನ ಮಾಲೀಕ ಅಶೋಕ್ ಸಾವಳಗಿ ಸೇರಿದಂತೆ ಸಿಬ್ಬಂದಿ ಪರಾರಿ ಆಗಿದ್ದಾರೆ. ಇವರನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಆದಷ್ಟು ಬೇಗ ಅವರನ್ನು ಸೆರೆ ಹಿಡಯಲಾಗುವುದು. ಅಲ್ಲದೆ ಕ್ರಷರ್ ಅಧಿಕೃತವೋ, ಅನಧಿಕೃತವೋ ಎಂಬುದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಅನುಪಮ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.

ಬ್ಲಾಸ್ಟ್ ನಲ್ಲಿ ಮೋಹನ್ ನಾಯಕ್ ರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಶಿಕ್ಷೆಗೆ ಒಳಪಡಿಬೇಕೆಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *