ಏಕಾಏಕಿ ಆರಂಭವಾದ ವೈನ್ ಶಾಪ್ – ಬಾಗಿಲಿಗೆ ಅಡ್ಡ ನಿಂತು ಸ್ಥಳೀಯರ ಪ್ರತಿಭಟನೆ

By
1 Min Read

ಚಿಕ್ಕಮಗಳೂರು: ಏಕಾಏಕಿ ಆರಂಭವಾದ ವೈನ್ ಶಾಪನ್ನ ತೆರೆಯಲು ಗ್ರಾಮಸ್ಥರು ವಿರೋಧಿಸಿ ಬಾರ್ ಬಾಗಿಲ ಮುಂದೆಯೇ ಧರಣಿ ಕೂತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಅಂಚೇ ಚೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದ್ಯದ ಅಂಗಡಿಯನ್ನ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಾರ್ ಮುಂದೆಯೇ ಪ್ರತಿಭಟಿಸಿದ್ದಾರೆ. ಬಾರ್ ತೆರೆಯಲು ಸ್ಥಳೀಯ ಗ್ರಾಮ ಪಂಚಾಯಿತಿಯ ಅನುಮತಿಯನ್ನೇ ಪಡೆದಿಲ್ಲ. ಸಾಲದಕ್ಕೆ ಯಾವುದೇ ನಿಯಮ ಪಾಲನೆ ಕೂಡ ಮಾಡದೆ ಏಕಾಏಕಿ ಮದ್ಯದಂಗಡಿ ತೆರೆದಿದ್ದಾರೆ. ಅಂಚೇ ಚೋಮನಹಳ್ಳಿ ಹಾಗೂ ಸುತ್ತಮುತ್ತ ಬಡ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಅಲೆಮಾರಿ ಬುಡಕಟ್ಟು ಜನಾಂಗದವರು ಇದ್ದಾರೆ. ಇಂತಹ ಜಾಗದಲ್ಲಿ ವೈನ್ ಶಾಪ್ ತೆರೆದರೆ ಕೂಲಿ ಕಾರ್ಮಿಕರು ಕುಡಿತದಿಂದ ಮನೆ ಮಠ ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ.

ಬಡಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹಾ ವೈನ್‍ಶಾಪನ್ನ ತೆರೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಡಜನರ ಮೇಲೆ ದುಷ್ಪರಿಣಾಮ ಬೀರುವ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಮದ್ಯದಂಗಡಿ ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮದ್ಯದಂಗಡಿ ತೆರೆಯಲು ಗ್ರಾಮ ಪಂಚಾಯಿತಿಯಿಂದಲೂ ಯಾವುದೇ ಅನುಮತಿ ಪಡೆದಿಲ್ಲ. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಂದಲೂ ಮದ್ಯದಂಗಡಿ ತೆರೆಯುವ ಬಗ್ಗೆ ವಿರೋಧ ವ್ಯಕ್ತವಾಗಿದೆ, ಈ ಮದ್ಯದಂಗಡಿ ತೆರೆಯಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಕೂಡ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *