ಮಹಾನಗರಗಳತ್ತ ನಿರಂತರ ಗುಳೆ ಹೊರಟ ಜನ

Public TV
1 Min Read

ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಜೋರಾಗಿ ನಡೆದಿದ್ದರೂ, ಕೃಷಿ ಕೂಲಿಕಾರ್ಮಿಕರು ಮಾತ್ರ ಮಹಾನಗರಗಳಿಗೆ ನಿರಂತರವಾಗಿ ಗುಳೆ ಹೊರಟಿದ್ದಾರೆ.

ದೇವದುರ್ಗ ತಾಲೂಕಿನ ಜಾಲಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ನಿತ್ಯ ಬೆಂಗಳೂರು ಸೇರಿದಂತೆ ಹಲವೆಡೆ ಗುಳೆಹೊರಟಿದ್ದಾರೆ. ಲಾಕ್‍ಡೌನ್ ಸಡಿಲಿಕೆಯಾಗಿರುವುದರಿಂದ ಕಾರ್ಮಿಕರು ಉದ್ಯೋಗ ಹರಿಸಿ ಗುಳೆ ಹೋಗುತ್ತಿದ್ದಾರೆ. ಕೃಷಿ ಚಟುವಟಿಕೆಗಳು ನಡೆಯುತ್ತಿದ್ದರೂ ನಿತ್ಯ ಕೂಲಿ ಕೆಲಸ ಸಿಗುವುದಿಲ್ಲ. ವಾರದಲ್ಲಿ ಎರಡು ಮೂರು ದಿನ ಮಾತ್ರ ಕೆಲಸ ಸಿಗುತ್ತಿದೆ. ಉಳಿದ ದಿನಗಳಲ್ಲಿ ಕೆಲಸವಿಲ್ಲದೆ ಕುಳಿತುಕೊಳ್ಳಬೇಕಾಗಿದೆ.

ಲಾಕ್‍ಡೌನ್ ನಿಂದ ಇಷ್ಟುದಿನ ಕೆಲಸವಿಲ್ಲದೆ ಕಷ್ಟಪಟ್ಟಿದ್ದೇವೆ ಈಗಲೂ ನಿತ್ಯ ಕೆಲಸವಿಲ್ಲದೆ ಬದುಕು ನಡೆಸಲು ಸಾಧ್ಯವಿಲ್ಲ, ಅಂತ ಕೂಲಿಕಾರ್ಮಿಕರು ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಸೇರಿ ಮಹಾನಗರಗಳಲ್ಲಿ ಗಾರೆಕೆಲಸ ಮಾಡುತ್ತಿದ್ದ ಕೂಲಿಕಾರರು ಪುನಃ ಗಾರೆಕೆಲಸಕ್ಕೆ ಗುಳೆ ಹೊರಟಿದ್ದಾರೆ.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯೋಜನೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ದೇವದುರ್ಗದ ಜಾಲಹಳ್ಳಿ ಗ್ರಾಮಪಂಚಾಯತಿಯನ್ನ ಮೇಲ್ದರ್ಜೆಗೆರಿಸಿರುವುದರಿಂದ ಉದ್ಯೋಗ ಖಾತ್ರಿ ಯೋಜನೆ ರದ್ದಾಗಿದೆ. ಇಲ್ಲಿನ ಕರಡಿಗುಡ್ಡ, ಚಿಂಚೋಡಿ ಗ್ರಾಮ ಪಂಚಾಯತಿಗೆ ಚುನಾವಣೆಯಾಗದೆ ಯೋಜನೆ ಸ್ಥಗಿತಗೊಂಡಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸಿಗದೆ ಜನ ಗಟ್ಟುಮೂಟೆ ಕಟ್ಟಿಕೊಂಡು ಗುಳೆ ಹೊರಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *