ಪ್ರಳಯವಾದರೂ ಆ 14 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದು ನಿಜ: ಸಿದ್ದರಾಮಯ್ಯ

Public TV
1 Min Read

– ವಿಧಾನಸಭೆಯಲ್ಲಿ ನಾನು ಹೇಳಿದ್ದು ಸತ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿ, ಪಕ್ಷ ಬಿಟ್ಟು ಹೋದ 14 ಮಂದಿಯನ್ನು ಪ್ರಳಯವಾದರೂ ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದು ನಿಜ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಪಕ್ಷ ಬಿಟ್ಟು ಹೋದ 14 ಶಾಸಕರು ಮಾತ್ರವಲ್ಲ, ಯಾರು ಬೇಕಾದರೂ ಕಾಂಗ್ರೆಸ್ ಸೇರಲು ಅರ್ಜಿ ಹಾಕಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ಕೆಡವಿ, ಪಕ್ಷ ಬಿಟ್ಟು ಹೋದ 14 ಮಂದಿಯನ್ನು ಸೇರಿಸಿಕೊಳ್ಳುವುದಾಗಿ ಯಾರೂ ಹೇಳಿಲ್ಲ. ಈ ಕುರಿತು ನಾನು ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದರು.

ತಮ್ಮ ವಿರುದ್ಧ ಯಾವುದೇ ವೀಡಿಯೋ ಪ್ರಸಾರ ಮಾಡದಂತೆ ಕೇಂದ್ರ ಸಚಿವ ಸದಾನಂದಗೌಡ ಅವರು ನ್ಯಾಯಾಲಯದಿಂದ ತಡೆ ಆದೇಶ ತಂದಿದ್ದಾರೆ. ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಆಗಿದೆ ಅವರ ಸ್ಥಿತಿ. ಕುಂಬಳ ಕಾಯಿ ಕಳ್ಳ ಎಂದರೆ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದೇಕೆ ಎಂದು ಪ್ರಶ್ನಿಸಿದರು.

ಕೋವಿಡ್ ಲಸಿಕೆಯ ಎರಡನೇ ಡೋಸ್‍ಗಾಗಿ ರಾಜ್ಯದಲ್ಲಿ ಜನ ಪರದಾಡುತ್ತಿದ್ದಾರೆ. ಲಸಿಕೆ ನೀಡುವ ಕಾರ್ಯವನ್ನು ಸಮರ್ಪಕವಾಗಿ ನಡೆಸುವಲ್ಲಿ ಈ ಸರ್ಕಾರ ವಿಫಲವಾಗಿದೆ. 18 ವರ್ಷ ಮೀರಿದವರಿಗೆ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಎಲ್ಲಿಯೂ ಲಸಿಕೆ ಸಿಗುತ್ತಿಲ್ಲ. ಲಸಿಕೆ ದಾಸ್ತಾನಿಲ್ಲ ಎಂದು ಬಿಬಿಎಂಪಿ ಆಯುಕ್ತರೇ ಹೇಳಿದ್ದಾರೆ. ಆರೋಗ್ಯ ಸಚಿವರು ಮಾತ್ರ ನಮ್ಮಲ್ಲಿ ಸಮಸ್ಯೆಯೇ ಇಲ್ಲ ಎನ್ನುತ್ತಿದ್ದಾರೆ. ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *