ಕರ್ನಾಟಕ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುತ್ತೆ: ಜಗದೀಶ್ ಶೆಟ್ಟರ್

Public TV
2 Min Read

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲೂ ಕರ್ನಾಟಕ ರಾಜ್ಯ ಅತೀ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾಪಗಳನ್ನು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಹೊರತಂದಿರುವ ಕ್ರಾಂತಿಕಾರಿ ಕಾನೂನುಗಳು ಹಾಗೂ ನೀತಿಗಳಿಂದ ಕರ್ನಾಟಕ ರಾಜ್ಯ ದೇಶದಲ್ಲಿ ನಂ.1 ಕೈಗಾರಿಕಾ ಸ್ನೇಹಿ ರಾಜ್ಯವಾಗುವತ್ತಾ ದಾಪುಗಾಲು ಇಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಬೆಂಗಳೂರು ನಗರದಲ್ಲಿ ಲಘು ಉದ್ಯೋಗ ಭಾರತಿ ಕರ್ನಾಟಕ, ಬೆಂಗಳೂರು ಉತ್ತರ ಪೀಣ್ಯ ಘಟಕದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವನ್ನು ಇನ್ನೂ ಹೆಚ್ಚು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕೈಗೊಂಡಿರುವ ಕ್ರಾಂತಿಕಾರಿ ಕಾನೂನು ಹಾಗೂ ನೀತಿಗಳು ಫಲ ನೀಡುತ್ತಿವೆ. ಕೊರೊನಾ ಸಂಕಷ್ಟ ಕಾಲದಲ್ಲೂ ಕೂಡಾ ಬಂಡವಾಳ ಹೂಡಿಕೆಯ ಪ್ರಸ್ತಾವನೆಯಲ್ಲಿ ರಾಜ್ಯ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಇದೇ ರೀತಿಯ ಟ್ರೆಂಡ್ ಮುಂದುವರಿದಲ್ಲಿ ನಂ.1 ಸ್ಥಾನ ಪಡೆದುಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ಕ್ಷೇತ್ರಗಳು ತೀವ್ರ ತೊಂದರೆಗೆ ಈಡಾಗಿವೆ. ಇದಕ್ಕೆ ಸಣ್ಣ ಕೈಗಾರಿಕೆಗಳು ಹೊರತಾಗಿಲ್ಲ. ದೇಶದ ಜಿಡಿಪಿ ಹಾಗೂ ಉದ್ಯೋಗಾವಕಾಶ ಹೆಚ್ಚಳಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ. ಇವುಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒಲವು ನೀಡುತ್ತಿದೆ ಎಂದರು.

ಕೈಗಾರಿಕೆಗಳಿಗೆ ವಿದ್ಯುತ್ ದರ ಇಳಿಕೆ: ರಾಜ್ಯದಲ್ಲಿ ಕೈಗಾರಿಕೆಗಳ ಬಳಸುವ ವಿದ್ಯುತ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿರುವುದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅವರು ಕೈಗಾರಿಕೆಗಳಿಗೆ ವಿಧಿಸುವ ಶುಲ್ಕದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಒಲವು ತೋರಿಸಿದ್ದಾರೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು. ಇದನ್ನೂ ಓದಿ: ಸಚಿವ ಸ್ಥಾನ ಸಿಗಲಿದೆ ಎಂಬ ಗಾಳಿ ಸುದ್ದಿಗೆ ಕಿವಿಗೊಡಬೇಡಿ: ಪ್ರತಾಪ್ ಸಿಂಹ

ಪೀಣ್ಯ ಕೈಗಾರಿಕಾ ಟೌನ್‍ಶಿಪ್: ರಾಜ್ಯದಲ್ಲಿ ಕೈಗಾರಿಕಾ ಟೌನ್‍ಶಿಪ್‍ಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸುತ್ತಿನ ಚರ್ಚೆಗಳು ನಡೆದಿವೆ. ಆದರೆ ಇವುಗಳ ಘೋಷಣೆಗಾಗಿ ಹಲವಾರು ಇಲಾಖೆಗಳ ಅನುಮತಿಯ ಅಗತ್ಯವಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೈಗಾರಿಕೆಗಳಿಗೆ ಆಸ್ತಿ ತೆರಿಗೆ: ವಸತಿ ಮತ್ತು ವಾಣಿಜ್ಯ ಆಸ್ತಿ ತೆರಿಗೆಗಳ ಮಧ್ಯದಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲಾಬನ್ನು ಘೋಷಿಸಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆಯೂ ಶೀಘ್ರದಲ್ಲೇ ತಿರ್ಮಾನ ಕೈಗೊಳ್ಳಲಾಗುವುದು ಎಂದರು.

Share This Article
Leave a Comment

Leave a Reply

Your email address will not be published. Required fields are marked *