ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರತಿದಿನ 3,500 ರಿಂದ 4,000 ಕೊರೊನಾ ಟೆಸ್ಟ್ ನಡೆಯುತ್ತಿದ್ದು, ಸೋಂಕು ಅಂಕೆಗೆ ಸಿಗದಂತೆ ಏರಿಳಿತವಾಗುತ್ತಿದೆ. ಹೀಗಾಗಿ ಅನ್‍ಲಾಕ್ ಆದರೂ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಕಳೆದ ನಾಲ್ಕು ದಿನದಿಂದ ಸರಾಸರಿ 39, 200, 126 ಹಾಗೂ 89 ರಂತೆ ಪ್ರಕರಣಗಳು ಬರುತ್ತಿರುವುದರಿಂದ ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಗಣನೀಯವಾಗಿ ಇಳಿಮುಖವಾಗುತ್ತಿದ್ದರೆ ಸೋಂಕು ಸಂಪೂರ್ಣ ಹತೋಟಿಗೆ ಬಂದಿದೆ ಎಂದು ಅಂದಾಜಿಸಬಹುದು. ಆದರೆ ಜಿಲ್ಲೆಯಲ್ಲಿ ಒಂದು ದಿನ 39 ಕೇಸ್ ಬಂದರೆ ಮರುದಿನ 200 ಕೇಸ್ ದಾಖಲಾಗುತ್ತಿರುವುದು ಜಿಲ್ಲಾಡಳಿತಕ್ಕೂ ತಲೆನೋವು ತರಿಸಿದೆ. ಕಳೆದ ಎರಡು ತಿಂಗಳಿಂದ ಲಾಕ್‍ಡೌನ್‍ನಿಂದ ಕಂಗಾಲಾಗಿದ್ದ ಜನ ಅನ್‍ಲಾಕ್‍ನಿಂದ ಸಂತಸಗೊಂಡಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ನಿರತರಾಗಿದ್ದಾರೆ. ಆದರೆ ಆತಂಕ ಮಾತ್ರ ಹಾಗೇ ಇದೆ.
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಆದರೆ 3-4ರ ಮಧ್ಯೆಯೇ ಆಟವಾಡುತ್ತಿದೆ. ಪ್ರತಿದಿನ 4,000 ಸಾವಿರದಷ್ಟು ಟೆಸ್ಟ್ ನಡೆದರೂ ಕೂಡ ಪಾಸಿಟಿವ್ ಸಂಖ್ಯೆ ದಿನಕ್ಕೊಂದು ರೀತಿ ಬರುತ್ತಿರುವುದು ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅನ್‍ಲಾಕ್ ಆಗಿರೋ ಖುಷಿಯಲ್ಲಿ ಜನ ಎರಡು ತಿಂಗಳಿಂದ ಬಾಗಿಲು ಹಾಕಿದ್ದ ಅಂಗಡಿಯ ಧೂಳನ್ನು ಹೊಡೆದು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಆದರೆ ಆತಂಕ ಮಾತ್ರ ಇನ್ನೂ ಮುಂದುವರಿದಿದೆ. ಹೀಗಾಗಿ ಅನ್‍ಲಾಕ್ ಆದರೂ ಜನ ಸಂಚಾರ ಜಿಲ್ಲೆಯಲ್ಲಿ ತುಸು ಕಡಿಮೆಯೇ ಇದೆ.
ಅಂಗಡಿ-ಮುಂಗಟ್ಟುಗಳ ಮಾಲೀಕರು ಕೂಡ ವ್ಯಾಪಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವಂತೆ ಜನರಿಗೆ ತಿಳಿ ಹೇಳುತ್ತಿದ್ದಾರೆ. ಆದರೆ ದಿನಕ್ಕೊಂದು ರೀತಿ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿರುವುದರಿಂದ ಜನ ಮತ್ತೆ ಭಯದಿಂದ ಇದ್ದಾರೆ.