ಮಲೆನಾಡಲ್ಲಿ ಭಾರೀ ಗಾಳಿ, ಮಳೆ – ಚಾರ್ಮಾಡಿಯಲ್ಲಿ ಧರೆಗುರುಳಿದ ಮರ

Public TV
1 Min Read

ಚಿಕ್ಕಮಗಳೂರು: ಭಾರೀ ಗಾಳಿ-ಮಳೆಗೆ ಎರಡು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ರಾತ್ರಿಯಿಂದ ಒಂದೇ ಸಮನೆ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಮಲೆನಾಡಿಗರ ಜನಜೀವನ ಕೂಡ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ, ಚಾರ್ಮಾಡಿ ಘಾಟ್, ಬಾಳೂರು, ಕಳಸ, ಬಣಕಲ್ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಒಂದೇ ಸಮನೆ ಬೀಸುತ್ತಿರುವ ಗಾಳಿ ಹಾಗೂ ಸುರಿಯುತ್ತಿರುವ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ಎರಡು ಮರಗಳು ಧರೆಗುರುಳಿವೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಬಣಕಲ್ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಲಾಕ್‍ಡೌನ್ ಇರುವುದರಿಂದ ವಾಹನ ಸಂಚಾರ ಹೆಚ್ಚಿಲ್ಲದ ಕಾರಣ ಟ್ರಾಫಿಕ್ ಜಾಮ್ ಸೇರಿದಂತೆ ಯಾವುದೇ ತೊಂದರೆಯಾಗಿಲ್ಲ. ಕಳೆದ ಎರಡು ವರ್ಷವೂ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಬೆಟ್ಟ-ಗುಡ್ಡಗಳು ಕುಸಿದಿದ್ದವು. ಇದರಿಂದ ಚಾರ್ಮಾಡಿ ಘಾಟಿಯಲ್ಲಿ ಮೂರು ತಿಂಗಳುಗಳ ಕಾಲ ಎಲ್ಲಾ ರೀತಿಯ ವಾಹನಗಳನ್ನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿತ್ತು. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಮಳೆ, ಮುಳುಗುವ ಭೀತಿಯಲ್ಲಿ ಹೆಬ್ಬಾಳೆ ಸೇತುವೆ, ಭೂ ಕುಸಿತ

ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಇರುವುದು ಚಾರ್ಮಾಡಿ ಘಾಟ್ ಒಂದೇ. ಬೇರೆ ಮಾರ್ಗವಿದ್ದರೂ 60-70 ಕಿ.ಮೀ. ಸುತ್ತಿಕೊಂಡು ಹೋಗಬೇಕು. ಈ ಮಾರ್ಗ ರಾಜ್ಯದ ಜನರಿಗೆ ತೀವ್ರ ಅನಿವಾರ್ಯ ಹಾಗೂ ಅಗತ್ಯವಿರುವ ಮಾರ್ಗವಾಗಿದೆ. ಈ ದಾರಿ ಕೇವಲ ರಸ್ತೆಯಾಗಿರದೆ ಸಾವಿರಾರು ಜನರ ಜೀವ ಉಳಿಸುವ ಸಂಜೀವಿನಿಯೂ ಆಗಿದೆ. ಇದನ್ನೂ ಓದಿ:ಕೊಡಗಿನಲ್ಲಿ ಮಳೆ ಆರ್ಭಟ- ಮನೆಗಳಿಗೆ ಹಾನಿ

Share This Article
Leave a Comment

Leave a Reply

Your email address will not be published. Required fields are marked *