ಓಬವ್ವನ ನಾಡಲ್ಲಿ ಸರಗಳ್ಳನ ಹಾವಳಿ- ಬೆಚ್ಚಿದ ವನಿತೆಯರು

Public TV
1 Min Read

– 15 ದಿನಗಳಲ್ಲಿ 12 ಸರಗಳ್ಳತನ
– ಕಳ್ಳನ ಸೆರೆಗಾಗಿ ಪೊಲೀಸರು ಸ್ಕೆಚ್

ಚಿತ್ರದುರ್ಗ: ಕೊರೊನಾ ಹೊತ್ತಲ್ಲಿ ಜನರ ಕೈಯಲ್ಲಿ ಕಾಸಿಲ್ಲ, ಕೆಲಸ ಸಿಗುತ್ತಿಲ್ಲ ಎಂದು ಜನ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಆದರೆ ಕೋಟೆ ನಾಡಿನಲ್ಲೊಬ್ಬ ಕಳ್ಳ ಪಲ್ಸರ್ ಬೈಕ್ ನಲ್ಲಿ ಮಿಂಚಿನಂತೆ ದಾಳಿಮಾಡಿ ಮಹಿಳೆಯರ ಕೊರಳಲ್ಲಿನ ಸರ ಎಗರಿಸಿ ಪರಾರಿಯಾಗುತ್ತಿದ್ದಾನೆ. ಹೀಗಾಗಿ ಮಹಿಳೆಯರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.

ನಗರದ ಫ್ಲೈ ಓವರ್, ಪ್ರಮುಖ ವೃತ್ತಗಳು ಹಾಗೂ ಜನರ ಓಡಾಟ ವಿರಳವಿರುವ ರಸ್ತೆಗಳಲ್ಲಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಖದೀಮ, ಮಹಿಳೆಯರ ಚಲನವಲನ ಗಮನಿಸಿ, ಸ್ಕೆಚ್ ಹಾಕಿ ಸರಗಳ್ಳತನ ಮಾಡುತ್ತಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದುರ್ಗ ಎಸ್‍ಪಿ ಜಿ.ರಾಧಿಕಾ, ಸರಗಳ್ಳನ ಸೆರೆಗಾಗಿ ಬಲೆ ಬೀಸಲಾಗಿದೆ. ನಗರ ಠಾಣೆ ಹಾಗೂ ಗ್ರಾಮಾಂತರ ಠಾಣೆ ಪೊಲೀಸರೊಂದಿಗೆ ವಿಶೇಷ ತಂಡ ರಚಿಸಿ, ಖರೀಮನನ್ನು ಹಿಡಿಯಲು ಚೆಕ್ ಪೋಸ್ಟ್ ಸಹ ಮಾಡಲಾಗಿದೆ. ಜಿಲ್ಲೆಯ ಹಲವೆಡೆ ಹಗಲು-ಇರುಳು ಎನ್ನದೇ ಪೊಲೀಸ್ ಸಿಬ್ಬಂದಿ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಜನರು ಕೊರೊನಾ ಎಂದು ಪ್ರಾಣ ಭಯದಲ್ಲೇ ಬದುಕುತ್ತಿದ್ದಾರೆ. ಆದರೆ ಈ ಲಾಕ್‍ಡೌನ್ ಸಮಯವನ್ನ ಚೆನ್ನಾಗಿ ಸದುಪಯೋಗ ಮಾಡಿಕೊಂಡಿರುವ ಈ ಖದೀಮ ಮಿಂಚಿನಂತೆ ದಾಳಿ ಮಾಡಿ ಮಹಿಳೆಯರ ಮೇಲಿನ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗುತ್ತಿದ್ದಾನೆ. ಇದರಿಂದಾಗಿ ಕೇವಲ 15 ದಿನಗಳಲ್ಲಿ 12 ಸರ ಕಳ್ಳತನ ಮಾಡಿ ಯಾವುದೇ ಸುಳಿವು ಬಿಡದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿತ್ತಿದ್ದಾನೆ. ಪ್ರತಿಬಾರಿಯೂ ಬ್ಲಾಕ್ ಅಂಡ್ ವೈಟ್ ಪಲ್ಸರ್ ಬೈಕ್ ನಲ್ಲಿ ಬರುವ ಕತರ್ನಾಕ್ ಕಳ್ಳ, ಈ ವರೆಗೆ ಸಿಕ್ಕಿಲ್ಲ. ಹೀಗಾಗಿ ಕೋಟೆನಾಡಿನ ಮಹಿಳೆಯರಲ್ಲಿ ಭಾರೀ ಆತಂಕ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *