ಡಾ.ಅಶ್ವತ್ಥನಾರಾಯಣ್ ಫೌಂಡೇಶನ್‍ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ -ಡಿಸಿಎಂ

Public TV
2 Min Read

ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಡಾ.ಅಶ್ವತ್ಥನಾರಾಯಣ್ ಫೌಂಡೇಶನ್ ವತಿಯಿಂದ ಇದುವರೆಗೂ 15,000 ಲಸಿಕೆ ನೀಡಲಾಗಿದ್ದು, ಇನ್ನು ಕೆಲ ದಿನದಲ್ಲೇ 10,000 ಲಸಿಕೆ ಕೊಡಲಾಗುವುದು ಎಂದು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಮಲ್ಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ನಿಮಿತ್ತ ಸೋಮವಾರದಂದು ಶ್ರೀರಾಮಪುರದ ಬಿಬಿಎಂಪಿ ಶಾಲೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮಗಳ ಜತೆ ಮಾತನಾಡಿರು.

ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಪ್ರತಿ ಸ್ಲಮ್‍ನಲ್ಲಿಯೂ ಜನರ ಮನೆಗಳ ಸಮೀಪವೇ ಲಸಿಕೆ ನೀಡುವ ಕೆಲಸ ಆಗುತ್ತಿದೆ. ಬೀದಿಬದಿ ವ್ಯಾಪಾರಿಗೂ, ಸ್ಲಂ ನಿವಾಸಿಗಳು, ಸೆಕ್ಯುರಿಟಿ ಗಾರ್ಡ್, ಆಟೋ ಚಾಲಕರು ಸೇರಿದಂತೆ ಬಿಪಿಎಲ್ ಕಾರ್ಡ್ ಉಳ್ಳ ಎಲ್ಲರನ್ನು ಹುಡುಕಿ- ಹುಡುಕಿ ಲಸಿಕೆ ನೀಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳೂ ಕೆಲಸ ಮಾಡುತ್ತಿದ್ದಾರೆ ಎಂದರು.

ಈಗಾಗಲೇ ಸರ್ಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ ಮಾಡಲಾಗುವುದು ಎಂದ ಅವರು, ಜತೆಗೆ, ನಮ್ಮ ಬಿಬಿಎಂಪಿ ವತಿಯಿಂದ ಆದ್ಯತಾ ವಲಯದ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಲ್ಲೇಶ್ವರ ಮಾತ್ರವಲ್ಲದೆ, ಇಡೀ ನಗರದಲ್ಲಿ ಈ ಕೆಲಸ ವೇಗವಾಗಿ ನಡೆಯುತ್ತಿದೆ. ಸದ್ಯದ ಅಂಕಿ-ಅಂಶದ ಪ್ರಕಾರ ಬೆಂಗಳೂರಿಲ್ಲಿ 30- 35% ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದರು ಡಿಸಿಎಂ.

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಕ್ಕೆ ಮೊದಲು ಲಸಿಕೆ ಅಭಿಯಾನಕ್ಕಾಗಿಯೇ ರಾಜ್ಯ ಸರಕಾರ ಪ್ರತ್ಯೇಕ ಆಪ್ ಸಿದ್ಧತೆ ಮಾಡುತ್ತಿದೆ. ಹೊಸ ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ ಆಪ್ ಸಿದ್ಧಪಡಿಸಲಾಗುತ್ತಿದೆ. ಅದು ಶೀಘ್ರವೇ ಬಳಕೆ ಲಭ್ಯವಾಗಲಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

18 ವರ್ಷ ಮೇಲ್ಪಟ್ಟವರಿಕೆ ವ್ಯಾಕ್ಸಿನೇಷನ್ ಶುರುವಾದ ಮೇಲೆ ಲಸಿಕೆಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಲಿದೆ. ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದ ಡಿಸಿಎಂ, ಆಪ್ ಬಂದ ಮೇಲೆ ಆಯಾ ಪ್ರದೇಶದವರು ಆಯಾ ಪ್ರದೇಶದಲ್ಲೇ ಲಸಿಕೆ ಪಡೆಯಬೇಕು. ಅದಕ್ಕೆ ಬೇಕಾದ ಎಲ್ಲ ಪ್ರೊಗ್ರಾಮಿಂಗ್ ಆಪ್‍ನಲ್ಲಿ ಮಾಡಲಾಗಿದೆ ಎಂದರು ಡಿಸಿಎಂ.

ಉಪ ಮುಖ್ಯಮಂತ್ರಿಗಳು ಸೋಮವಾರ ವ್ಯಾಕ್ಸಿನೇಷನ್ ನಡೆದ ಶ್ರೀರಾಂಪುರ ಬಿಬಿಎಂಪಿ ಶಾಲೆ ಸೇರಿದಂತೆ ಸುಬ್ರಹ್ಮಣ್ಯ ನಗರದ ಬಾಲಾಜಿ ಸಮುದಾಯ ಭವನ ಹಾಗೂ ಮಲ್ಲೇಶ್ವರದ 7ನೇ ಮುಖ್ಯ ರಸ್ತೆಯಲ್ಲಿರುವ ದೇಶಪಾಂಡೆ ಭವನದ ಲಸಿಕೆ ಶಿಬಿರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *