ಯೋಗಿಗೆ ಮೋದಿ ಶುಭ ಹಾರೈಸಿಲ್ಲ ಯಾಕೆ? – ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆ

Public TV
2 Min Read

– ಯೋಗಿ ಮತ್ತೆ ಮೋದಿ ಮಧ್ಯೆ ಹಳಸಿದ್ಯಾ ಸಂಬಂಧ?
– ಹಿರಿಯ ಸಚಿವರಿಂದ ಸಿಕ್ತು ಸ್ಪಷ್ಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೌದು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನಿ ಮೋದಿ ದೇಶ ಮತ್ತು ವಿದೇಶದ ಎಲ್ಲ ಗಣ್ಯರಿಗೆ, ರಾಜಕೀಯ ನಾಯಕರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಆದರೆ ಶನಿವಾರ ಯೋಗಿ ಆದಿತ್ಯನಾಥ್ ಅವರು 49ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವೇಳೆ ಮೋದಿ ಹುಟ್ಟುಹಬ್ಬದ ಶುಭಾಶಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸದ್ದಕ್ಕೆ ಪ್ರಧಾನಿ ಮತ್ತು ಯೋಗಿ ಮಧ್ಯೆ ಸಂಬಂಧ ಸರಿ ಇಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿ ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಚರ್ಚೆ ಏನು?
ಯೋಗಿ ಅದಿತ್ಯನಾಥ್ ಮತ್ತು ನರೇಂದ್ರ ಮೋದಿ ಅವರ ಮಧ್ಯೆ ಸಂಬಂಧ ಹಳಸಿದೆ. ಮೋದಿಗೆ ಆಪ್ತರಾಗಿರುವ ಗುಜರಾತ್ ಕೇಡರ್ ಮಾಜಿ ಐಎಎಸ್ ಅಧಿಕಾರಿ ಅರವಿಂದ ಕುಮಾರ್ ಶರ್ಮಾ ಅವರನ್ನು ಮೋದಿ ಸೂಚನೆಯಂತೆ ಉತ್ತರ ಪ್ರದೇಶದಲ್ಲಿ ಎಂಎಲ್‍ಸಿಯನ್ನಾಗಿ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಯಾದ ಮೋದಿ ಆಪ್ತ ಐಎಎಸ್ ಅಧಿಕಾರಿ

ಎಂಎಲ್‍ಸಿಯಾದ ಬಳಿಕ ಅರವಿಂದ್ ಅವರನ್ನು ಉಪಮುಖ್ಯಮಂತ್ರಿ ಮಾಡಲು ಮೋದಿ ಮುಂದಾಗಿದ್ದರು. ಇವರನ್ನು ಉಪಮುಖ್ಯಮಂತ್ರಿ ಮಾಡಲು ದಿನೇಶ್ ಶರ್ಮಾ ಮತ್ತು ಕೇಶವ ಪ್ರಸಾದ್ ಮೌರ್ಯರಲ್ಲಿ ಒಬ್ಬರನ್ನು ಕೈಬಿಡಬೇಕಿತ್ತು. ಇದಕ್ಕೆ ಯೋಗಿ ಆದಿತ್ಯನಾಥ್ ಒಪ್ಪಿಗೆ ನೀಡಿಲ್ಲ. ಹೀಗಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವೆ ತೀವ್ರ ಭಿನ್ನಮತ ಹುಟ್ಟಿದೆ. ಈ ಕಾರಣಕ್ಕೆ ಶನಿವಾರ ಯೋಗಿಗೆ ಮೋದಿ ಶುಭಾಶಯ ಹೇಳಲಿಲ್ಲ ಎಂಬ ವಿಚಾರ ಚರ್ಚೆಯಾಗುತ್ತಿದೆ.

ಮೂಲಗಳು ಏನು ಹೇಳಿವೆ?
ಪ್ರಧಾನಿ ಮೋದಿ ಯೋಗಿಗೆ ಹುಟ್ಟುಬ್ಬದ ಶುಭಾಶಯವನ್ನು ಯಾಕೆ ಹೇಳಲಿಲ್ಲ ಎಂಬುದರ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಲ್ಲ. ಆದರೆ ಹಿರಿಯ ಸಚಿವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಕಳೆದ ಏಪ್ರಿಲ್‍ನಿಂದ ಯಾವುದೇ ನಾಯಕರಿಗೆ ವೈಯಕ್ತಿಕವಾಗಿ ಶುಭ ಕೋರುವುದನ್ನು ನಿಲ್ಲಿಸಿದ್ದಾರೆ. ಕೊರೊನಾದಿಂದ ರಾಷ್ಟ್ರದಲ್ಲಿ ಜನರಿಗೆ ತೊಂದರೆಯಾಗಿರುವಾಗ ಶುಭ ಕೋರುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

ಟ್ವಿಟ್ಟರ್ ಹ್ಯಾಂಡಲ್ ಗಮಿಸಿದರೆ ಏಪ್ರಿಲ್ ಬಳಿಕ ಪಿಎಂ ಮೋದಿಯವರು ಯಾವೊಬ್ಬ ಮುಖ್ಯಮಂತ್ರಿಗಳಿಗೆ/ ಮಂತ್ರಿಗಳಿಗೆ ಹುಟ್ಟುಹಬ್ಬದ ಶುಭವನ್ನು ಕೋರಿಲ್ಲ. ಏಪ್ರಿಲ್ 24 ರಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹುಟ್ಟುಹಬ್ಬ ಆಚರಿಸಿದ್ದರು. ಬಳಿಕ ಜಾರ್ಖಂಡ್ ನಾಯಕ ಅರ್ಜುನ್ ಮುಂಡಾ ಮತ್ತು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನ್ಮದಿನ ಬಂದಿತ್ತು. ಮೇ 5 ರಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮೇ 18 ರಂದು ಕ್ಯಾಬಿನೆಟ್ ಸಚಿವ ಥಾವರ್ ಚಂದ್ ಗೆಹ್ಲೋಟ್, ಮೇ 24 ರಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಮೇ 27 ರಂದು ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹುಟ್ಟುಹಬ್ಬದಂದು ಮೋದಿ ಶುಭ ಹಾರೈಸಿರಲಿಲ್ಲ.

Share This Article
Leave a Comment

Leave a Reply

Your email address will not be published. Required fields are marked *