ನಮ್ಮ ಡೈರಿಯಲ್ಲಿ ಫೀಡ್ಸ್ ತಗಳಲ್ಲ, ನಿಮ್ಮ ಹಾಲು ಬೇಡ

Public TV
2 Min Read

– ಒಬ್ಬರ ಕಥೆಯಲ್ಲಿ, ಹಲವು ರೈತರಿಗೆ ಅನ್ಯಾಯ
– ಗ್ರಾಮದ ಬೇರೆ ರೈತರಿಂದ ಹಾಲು ಖರೀದಿ

ಚಿಕ್ಕಮಗಳೂರು:“ನೀವು ನಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲ್ಲ. ಹಾಗಾಗಿ, ಸದ್ಯಕ್ಕೆ ನಿಮ್ಮ ಹಾಲು ಬೇಡ” ಎಂದು ರೈತರಿಂದ ಡೈರಿ ಸಿಬ್ಬಂದಿ ಹಾಲು ಹಾಕಿಸಿಕೊಳ್ಳದ ಹಿನ್ನೆಲೆಯಲ್ಲಿ ರೈತ ಪ್ರತಿದಿನ ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾನೆ.

ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ರೈತ ತಿರುಮಲೇಶ್ ಕಳೆದ ಆರು ವರ್ಷಗಳಿಂದ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. 2016ರಿಂದಲೂ ತೇಗೂರು ಗ್ರಾಮದಲ್ಲಿರುವ ಡೈರಿಗೆ ಹಾಲು ಹಾಕುತ್ತಿದ್ದಾರೆ. ಆದರೆ, ಕಳೆದೊಂದು ತಿಂಗಳಿಂದ ಡೈರಿಯವರು ತಿರುಮಲೇಶ್ ಅವರ ಹಾಲನ್ನ ಹಾಕಿಸಿಕೊಳ್ಳುತ್ತಿಲ್ಲ. ಕಾರಣ ಕೇಳಿದರೆ, ನೀವು ನಮ್ಮ ಡೈರಿಯಲ್ಲಿ ಹಸುವಿಗೆ ಫೀಡ್ಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಸದ್ಯಕ್ಕೆ ಹಾಲು ಬೇಡ. ಬೇಕಾದಾಗ ಫೋನ್  ಮಾಡುತ್ತೇವೆ ತಂದು ಹಾಕಿ ಎಂದು ಹೇಳಿದ್ದಾರೆ. ಇದರಿಂದ ರೈತ ತಿರುಮಲೇಶ್ ಕಂಗಾಲಾಗಿದ್ದಾರೆ.

ಮೊದಲೇ ಕಳೆದೊಂದು ವರ್ಷದಿಂದ ರೈತ ಸಮುದಾಯ ಕೊರೋನಾದ ಅಬ್ಬರದಲ್ಲಿ ಸಂಕಷ್ಟಕ್ಕೀಡಾಗಿದೆ. ಹೀಗಿರುವಾಗ ಡೈರಿ ಸಿಬ್ಬಂದಿ ತಮ್ಮ ಡೈರಿಯಲ್ಲಿ ಫೀಡ್ಸ್ ತೆಗೆದುಕೊಳ್ಳಲಿಲ್ಲ ಎಂದು ಹಾಲನ್ನ ಹಾಕಿಸಿಕೊಳ್ಳದಿರುವುದರಿಂದ ರೈತ ತಿರುಮಲೇಶ್ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಒಂದೆಡೆ ಕೂಲಿ ಇಲ್ಲ. ಮತ್ತೊಂದೆಡೆ ಡೈರಿಯಲ್ಲಿ ಹಾಲು ಖರೀದಿಸಲ್ಲ. ಇತ್ತ ಹೊಲದಲ್ಲಿ ಜೋಳವೂ ಇಲ್ಲ. ಅತ್ತ ಬಣವೆಯಲ್ಲಿ ಹುಲ್ಲೂ ಇಲ್ಲ. ಕೈಯಲ್ಲಿ ದುಡ್ಡೂ ಇಲ್ಲದಂತಾಗಿದ್ದು ರೈತ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನ್ನದಾತನ ಜೊತೆ ರೈತನ ಬೆನ್ನೆಲುಬು ಎಂದು ಕರೆಸಿಕೊಳ್ಳೋ ರಾಸುಗಳು ಕೂಡ ಉಪವಾಸದ ಸ್ಥಿತಿ ನಿರ್ಮಾಣವಾಗಿದೆ.

ತೇಗೂರು ಗ್ರಾಮದ ಡೈರಿಯಲ್ಲಿ ಫೀಡ್ಸ್ ತಂದರೆ ಹಸು ತಿನ್ನಲ್ಲ. ಅದಕ್ಕೆ ತಿರುಮಲೇಶ್ ಬೇರೆಡೆಯಿಂದ ಫೀಡ್ಸ್ ತಂದು ರಾಸುಗಳಿಗೆ ಕೊಡುತ್ತಾರೆ. ಆದರೆ, ತೇಗೂರಿನ ಡೈರಿಯವರು ಲಾಕ್‍ಡೌನ್ ಇದೆ. ಹೋಟೆಲ್‍ಗಳೂ ಕೂಡ ಬಂದ್ ಆಗಿದೆ. ಹಾಲನ್ನ ಯಾರೂ ಖರೀದಿಸಲ್ಲ. ಬೇಕಾದಾಗ ಫೋನ್ ಮಾಡುತ್ತೇವೆ ಆಗ ತೆಗೆದುಕೊಂಡು ಬನ್ನಿ ಎಂದಿದ್ದಾರೆ.

ಈ ಡೈರಿ ಇರೋದೆ ತೇಗೂರು, ಗವನಹಳ್ಳಿ ಹಾಗೂ ನಲ್ಲೂರು ಗ್ರಾಮದ ರೈತರಿಗಾಗಿ. ಆದರೆ, ಎಂಟತ್ತು ಕಿ.ಮೀ. ದೂರದ ಹಾಗೂ ಈ ಡೈರಿಗೆ ಸಂಬಂಧವೇ ಇಲ್ಲದ ಊರುಗಳ ಹಾಲನ್ನೂ ಖರೀದಿ ಮಾಡುವ ಡೈರಿ ಸಿಬ್ಬಂದಿ ಈ ರೈತನ ಹಾಲನ್ನ ಮಾತ್ರ ತೆಗೆದುಕೊಳ್ಳುತ್ತಿಲ್ಲ. ಅವರೆಲ್ಲಾ ನಮ್ಮ ಡೈರಿಯಲ್ಲೇ ಫೀಡ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ, ಅವರ ಹಾಲನ್ನ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ನಿಮ್ಮ ಹಾಲು ಬೇಡ ಎಂದಿದ್ದಾರೆ. ಬೇರೆ ದಾರಿ ಇಲ್ಲದ ಈ ಹೈನುಗಾರ ಬೆಳಗ್ಗೆ-ಸಂಜೆ ಸುಮಾರು ಎಂಟತ್ತು ಲೀಟರ್ ಹಾಲನ್ನ ಗಿಡಕ್ಕೆ ಸುರಿಯುತ್ತಿದ್ದಾರೆ. ಇದು ಇವರೊಬ್ಬರ ಸಮಸ್ಯೆಯಲ್ಲ.  ಈ ರೀತಿ ಹಲವು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

ತೇಗೂರಿನ ಡೈರಿಯಲ್ಲಿ ಯಾರು ಫೀಡ್ಸ್ ತೆಗೆದುಕೊಳ್ಳುತ್ತಾರೆ ಅವರ ಹಾಲನ್ನು ತೆಗೆದುಕೊಳ್ಳುತ್ತಾರೆ. ಯಾರೂ ಖರೀದಿಸಲ್ಲ ಅವರ ಹಾಲು ಇವರಿಗೆ ಭಾರವಾಗುತ್ತೆ. ಡೈರಿಯವರ ಈ ನಡೆಯಿಂದ ತೇಗೂರು, ಗವನಹಳ್ಳಿ, ನಲ್ಲೂರಿನ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಕೂಲಿ ಇಲ್ಲ. ಹಾಲು ತೆಗೆದುಕೊಳ್ಳುತ್ತಿಲ್ಲ. ಮಳೆ ಇಲ್ಲದೆ ಹೊಲಗದ್ದೆಗಳಲ್ಲಿ ಜೋಳವೂ ಇಲ್ಲ. ಬಣವೆ ಹುಲ್ಲೂ ಖಾಲಿಯಾಗಿದೆ. ಖಾಸಗಿಯಾಗಿ ಹುಲ್ಲು ಖರೀದಿಸಲು ಒಂದು ಹೊರೆಗೆ 150-200 ರೂಪಾಯಿ ಹಣ ಕೊಡಬೇಕು. ಹುಸುಗಳನ್ನ ತಂದ ಲೋನ್ ಕಟ್ಟಬೇಕು. ದಾರಿ ಕಾಣದೆ ಹೈನುಗಾರರು ತಲೆಮೇಲೆ ಕೈಹೊದ್ದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಕೂಡಲೇ ಡೈರಿಯವರು ಎಲ್ಲಾ ರೈತರ ಹಾಲನ್ನ ಖರೀದಿಸಿ ರಾಸುಗಳ ಜೊತೆ ನಮ್ಮ ಹೊಟ್ಟೆಯನ್ನೂ ತುಂಬಿಸಬೇಕೆಂದು ಮನವಿ ಮಾಡಿದ್ದಾರೆ. ಡೈರಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ. ಹಾಲು ಹಾಕಿಸಿಕೊಳ್ಳುವ ಡೈರಿ ಸಿಬ್ಬಂದಿ ಕೂಡ ವ್ಯವಹಾರ ಬಿಟ್ಟು ರೈತರ ಕಷ್ಟವನ್ನು ಅರಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *