ಮಹಾರಾಷ್ಟ್ರದಲ್ಲಿ ‘ಕೊರೊನಾ ಮುಕ್ತ ಗ್ರಾಮ’ ಸ್ಪರ್ಧೆ- ಗೆದ್ದ ಗ್ರಾಮಗಳಿಗೆ 50 ಲಕ್ಷ ಬಹುಮಾನ

Public TV
2 Min Read

– ದ್ವಿತೀಯ ಸ್ಥಾನಕ್ಕೆ 25 ಲಕ್ಷ, ತೃತೀಯ ಸ್ಥಾನಕ್ಕೆ 15 ಲಕ್ಷ ಪ್ರೈಜ್

ಮುಂಬೈ: ದೇಶಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇನ್ನೂ ಭಯಾನಕ ವಿಚಾರ ಎಂಬಂತೆ ಹಳ್ಳಿಗಳಿಗೂ ಸಹ ಮಹಾಮಾರಿ ಆವರಿಸುತ್ತಿದೆ. ಹೀಗಾಗಿ ಹಳ್ಳಿಗಳಿಗೆ ಕೊರೊನಾ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ‘ಕೊರೊನಾ ಮುಕ್ತ ಗ್ರಾಮ’ ಸ್ಪರ್ಧೆಯ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.

ಸ್ಥಳೀಯ ಆಡಳಿತವನ್ನು ಪ್ರೋತ್ಸಾಹಿಸುವುದು ಹಾಗೂ ಹಳ್ಳಿಗಳಿಗೆ ಕೊರೊನಾ ವ್ಯಾಪಿಸದಂತೆ ತಡೆಯುವುದು, ಈ ಮೂಲಕ ಕೊರೊನಾ ಮುಕ್ತ ರಾಜ್ಯವನ್ನಾಗಿಸುವುದು ಈ ಪರಿಕಲ್ಪನೆಯ ಉದ್ದೇಶವಾಗಿದೆ. ಹೀಗಾಗಿ ಹಳ್ಳಿ ಹಳ್ಳಿಗಳ ನಡುವೆ ‘ಕೊರೊನಾ ಮುಕ್ತ ಗ್ರಾಮ’ ಸ್ಪರ್ಧೆಯನ್ನು ಪರಿಚಯಿಸಿದೆ. ಸ್ಪರ್ಧೆಯಲ್ಲಿ ಗೆದ್ದ ಹಳ್ಳಿಗೆ 50 ಲಕ್ಷ ರೂ.ಗಳ ಪ್ರಥಮ ಬಹುಮಾನ ನೀಡುವುದಾಗಿ ಘೊಷಿಸಿದೆ. ರಾಜ್ಯದ ಒಟ್ಟು 6 ಕಂದಾಯ ವಿಭಾಗಗಳಲ್ಲಿ ಜಯಗಳಿಸಿದ ಹಳ್ಳಿಗಳಿಗೆ 50 ಲಕ್ಷ ರೂ.ಗಳ ಬಹುಮಾನ ದೊರೆಯುತ್ತದೆ. ಇದನ್ನೂ ಓದಿ: ವ್ಯಾಕ್ಸಿನ್ ಖರೀದಿಗೆ ಮೀಸಲಿಟ್ಟ 35,000 ಕೋಟಿ ಏನಾಯ್ತು? ಲೆಕ್ಕ ಪರಿಶೋಧನೆಗೆ ಸುಪ್ರೀಂಕೋರ್ಟ್ ಆದೇಶ

ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಫ್ ಈ ಕುರಿತು ಮಾಹಿತಿ ನೀಡಿದ್ದು, ‘ನನ್ನ ಗ್ರಾಮ ಕೊರೊನಾ ಮುಕ್ತ’ ಅಭಿಯಾನವನ್ನು ಇತ್ತೀಚೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದು, ಗ್ರಾಮ, ತಾಲೂಕು, ಜಿಲ್ಲೆ ಹೀಗೆ ಇಡೀ ಆದಷ್ಟು ಬೇಗ ರಾಜ್ಯವನ್ನು ಕೊರೊನಾ ಮುಕ್ತಗೊಳಿಸುವುದು ಇದರ ಉದ್ದೇಶವಾಗಿದೆ ಎಂದರು.

ಭಾಗವಹಿಸುವ ಗ್ರಾಮಗಳನ್ನು 22 ಮಾನದಂಡಗಳ ಆಧಾರದ ಮೇಲೆ ಅಳೆಯಲಾಗುತ್ತದೆ. ಈ ಕುರಿತು ರಚಿಸಲಾದ ಸಮಿತಿ ನಿರ್ಣಯ ಕೈಗೊಳ್ಳುತ್ತದೆ. ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ನಿರ್ವಹಿಸಿದ ಒಟ್ಟು 6 ಕಂದಾಯ ವಿಭಾಗಗಳಲ್ಲಿ ತಲಾ ಮೂರು ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 50 ಲಕ್ಷ ರೂ. ದ್ವಿತೀಯ 25 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 15 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಸಚಿವರು ವಿವರಿಸಿದರು.

ಒಟ್ಟು 18 ಬಹುಮಾನಗಳನ್ನು ನಿಡಲಾಗುತ್ತದೆ, ಒಟ್ಟು 5.4 ಕೋಟಿ ರೂ. ಬಹುಮಾನದ ಮೊತ್ತವಾಗಿದೆ. ವಿಜೇತ ಗ್ರಾಮಗಳಿಗೆ ಬಹುಮಾನದ ಮೊತ್ತಕ್ಕೆ ಸಮಾನವಾದ ಹೆಚ್ಚುವರಿ ಮೊತ್ತವನ್ನು ಪ್ರೋತ್ಸಾಹವಾಗಿ ನೀಡಲಾಗುವುದು. ಇದನ್ನು ಆ ಗ್ರಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ಮುಶ್ರಫ್ ಮಾಹಿತಿ ನೀಡಿದರು.

ಭಾನುವಾರ ನಡೆದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 21 ವರ್ಷದ ರುತುರಾಜ್ ದೇಶ್ಮುಖ್ ರಾಜ್ಯದ ಕಿರಿಯ ಸರ್ಪಂಚ್ ಹಾಗೂ ಸೋಲಾಪುರ ಜಿಲ್ಲೆಯ ಘಾಟ್ನೆ ಗ್ರಾಮವನ್ನು ಕೊರೊನಾ ಮುಕ್ತವಾಗಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *