ಅಮೆರಿಕ, ಯೂರೋಪ್, ಇಸ್ರೇಲ್‍ಗಳಲ್ಲಿ ಲಸಿಕೆಯಿಂದಲೇ ಕೊರೊನಾ ತಗ್ಗಿದೆ, ವ್ಯಾಕ್ಸಿನ್‍ಗೆ ಆದ್ಯತೆ ನೀಡಿ: ಎಂ.ಬಿಪಿ.ಪಾಟೀಲ್

Public TV
1 Min Read

ವಿಜಯಪುರ: ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100 ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ. ಆದಷ್ಟು ಬೇಗ ಲಸಿಕೆಯನ್ನು ನೀಡಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆ ಆತಂಕವೂ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಉಳಿದ ಎಲ್ಲ ವಿಷಯಗಳನ್ನು ಬದಿಗಿರಿಸಿ, ಅತೀ ಕಡಿಮೆ ಅವಧಿಯಲ್ಲಿ 100 ಕೋಟಿ ಜನರಿಗೆ ವ್ಯಾಕ್ಸಿನೆಷನ್ ಮಾಡಿಸುವ ಅಭಿಯಾನವನ್ನು ಕೈಗೊಂಡು, ಅದಕ್ಕೆ ಎಲ್ಲ ಅಗತ್ಯ ನೆರವು ಒದಗಿಸಿ, ವಿಶೇಷ ಆದ್ಯತೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಆಗ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಮತ್ತು ಶಾಶ್ವತ ಪರಿಹಾರ ಸಾಧ್ಯ ಎಂದರು.

ಈಗಾಗಲೇ ವ್ಯಾಕ್ಸಿನೆಷನ್ ಮುಗಿಸಿರುವ ಅಮೇರಿಕಾ, ಯೂರೋಪಿಯನ್ ರಾಷ್ಟ್ರಗಳು, ಇಸ್ರೇಲ್‍ ಮತ್ತಿತರ ದೇಶಗಳು ಈ ಮಹಾಮಾರಿಯಿಂದ ಮುಕ್ತವಾಗಿ ಅಲ್ಲಿನ ಜನ-ಜೀವನ ಮುಂಚಿನಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆ ಮಾದರಿಯಲ್ಲಿ ಭಾರತದಲ್ಲಿಯೂ 130 ಕೋಟಿ ಜನರಲ್ಲಿ ಕನಿಷ್ಠ 100 ಕೋಟಿ ಜನರನ್ನು ಗುರಿಯಾಗಿಸಿ, ಈ ಲಸಿಕೆ ಹಾಕಿಸಬೇಕು. ನಮ್ಮ ದೇಶದಲ್ಲಿಯೇ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು. ಅಗತ್ಯವಿರುವಷ್ಟು ಬೇರೆ ರಾಷ್ಟ್ರಗಳಿಂದ ಕೂಡ ಲಸಿಕೆ ಆಮದು ಮಾಡಿಕೊಂಡು, ಒಟ್ಟಾರೆ 100 ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿ ನಮ್ಮ ಸರ್ಕಾರಗಳು ಕಾರ್ಯಪ್ರವೃತ್ತರಾಗ ಬೇಕು ಎಂದು ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *