ಕೋವಿಡ್ ನಿರ್ವಹಣೆ ಹೊಣೆ ಹೊತ್ತ ಸಚಿವರ ಜೊತೆ ಸಿಎಂ ಸಭೆ – ಮೂರನೇ ಅಲೆ ಎದುರಿಸಲು ಸಜ್ಜಾದ ಸರ್ಕಾರ

Public TV
2 Min Read

ಬೆಂಗಳೂರು: ಕೋವಿಡ್ ನಿರ್ವಹಣೆ ಹೊಣೆ ಹೊತ್ತು ಐವರು ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದೆ. ಸಭೆಯಲ್ಲಿ ಸೋಂಕು ನಿರ್ವಹಣಾ ಪ್ರಗತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಕೋವಿಡ್ -19 ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಪ್ರಮುಖವಾಗಿ ಕಟ್ಟುನಿಟ್ಟಿನ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮಿಡಿಸಿವಿಯರ್ ಡ್ರಗ್ ಪೂರೈಕೆಯನ್ನು ಅಗತ್ಯತೆಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

ಖಾಸಗಿ ಆಸ್ಪತ್ರೆ ಗಳ ಬೆಡ್ ಗಳ ಬಗ್ಗೆ ನಿಗಾ ಇಡಬೇಕು. ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗು ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದರು. ವಾರ್ ರೂಮ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆ ಗಳಿಗೆ ಆಕ್ಸಿಜನ್ ಜನರೇಟರ್ ಪ್ಲಾಂಟ್ ಹಾಕಲು ಈಗಿನಿಂದಾನೆ ಕೆಲಸ ಶುರು ಮಾಡಲು ಸೂಚಿಸಲಾಯಿತು. 3 ನೇ ಅಲೆಗೆ ಈಗಿನಿಂದಾನೆ ಸಿದ್ಧರಾಗಬೇಕಿದ್ದು ಅದಕ್ಕೊಂದು ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಸೂಚಿಸಲಾಯಿತು. ಶಾಸಕರು ಹಾಗು ಸಚಿವರು ತಮ್ಮ ತಮ್ಮ ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿ. ಜಿಲ್ಲೆಗಳ ಕರೋನ ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ನಾಳೆ ಎಲ್ಲ ಕೋವಿಡ್ ಕೇರ್ ಸೆಂಟರ್ ಗಳಿಗೂ 2,000 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಕೊಡುತ್ತಿದ್ದೇವೆ. ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುತ್ತೆ ಅಂತ ತಜ್ಞರು ಎಚ್ಚರಿಕೆ ನೀಡಿದ್ದು, ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗುತ್ತಿದ್ದೇವೆ. ಮೂರನೇ ಅಲೆ ಎದುರಿಸಲು ಟಾಸ್ಕ್ ಫೋರ್ಸ್ ರಚಿಸಿದ್ದೇವೆ. ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆಯುತ್ತೇವೆ ಎಂದು ಹೇಳಿದರು.

ಲಾಕ್‍ಡೌನ್ ಇವತ್ತು ಯಶಸ್ವಿಯಾಗಿದ್ದು, ಜನರೂ ಸಹಕಾರ ಕೊಟ್ಟಿದ್ದಾರೆ. ಮೊದಲ ದಿನ ಬಿಗಿ ಕ್ರಮ ಕೈಗೊಂಡಿದ್ದೇವೆ. ಆದ್ರೆ ಜನರಿಗೆ ಹಿಂಸೆ ಕೊಡುತ್ತಿದ್ದೇವೆ ಅಂತಲ್ಲ. ಮಾಧ್ಯಮಗಳು ಜನತಾ ಕಫ್ರ್ಯೂ ಸಡಿಲ ಇತ್ತು ಅಂತ ಹೇಳಿದ್ದರಿಂದ ಲಾಕ್‍ಡೌನ ಜಾರಿ ಮಾಡಿದ್ದೇವೆ. ಈಗಾಗಲೇ ಲಾಠಿ ಚಾರ್ಜ್ ಮಾಡದಂತೆ ಡಿಜಿಪಿ ಆದೇಶಿಸಿದ್ದಾರೆ. ಲಾಠಿ ಚಾರ್ಜ್ ಬದಲು ಎಚ್ಚರಿಕೆ ಕೊಡೋದೋ, ವಾಹನ ಸೀಜ್ ಮಾಡುವುದು ಮಾಡಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಲಾಕ್‍ಡೌನ್ ವೇಳೆ ವ್ಯಾಕ್ಸಿನ್ ಹಾಕಿಸಿಕೊಳ್ಳೋರಿಗೆ ಅವಕಾಶ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಎಸ್‍ಎಂಎಸ್ ಬರುತ್ತೆ. ಎಸ್‍ಎಂಎಸ್ ಬರೋರು ಮಾತ್ರ ಬಂದು ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *