ಚಿಕ್ಕಮಗಳೂರು: ಇಡೀ ದಿನ ರಸ್ತೆಯಲ್ಲಿ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವುದರ ಜೊತೆ ಕೊರೊನಾ ನಿಯಂತ್ರಣಕ್ಕೆ ಜನರನ್ನು ಗುಂಪು ಸೇರದಂತೆ ರಸ್ತೆ ಕಾಯುವ ಪೊಲೀಸರಿಗೆ ಕಾಫಿನಾಡಿನ ಯುವಕರು ಇಂದು ಮಧ್ಯಾಹ್ನ ಬಿರಿಯಾನಿ ಊಟ ನೀಡಿದ್ದಾರೆ.
ಚಿಕ್ಕಮಗಳೂರು ನಗರದ ಜೆಡಿಎಸ್ ಮುಖಂಡ ಸಿರಾಜ್ ಹಾಗೂ ಅವರ ಸ್ನೇಹಿತರು ವೆಜ್ ಬಿರಿಯಾನಿ ಹಾಗೂ ಚಿಕನ್ ಬಿರಿಯಾನಿ ಎರಡೂ ಊಟವನ್ನ ತಯಾರಿಸಿಕೊಂಡು ಎಲ್ಲಾ ಪೊಲೀಸರಿಗೂ ವಿತರಿಸಿದ್ದಾರೆ. ನಗರದ ಮುಖ್ಯ ಸರ್ಕಲ್, ಪೊಲೀಸ್ ಠಾಣೆ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಡ್ಯೂಟಿ ಮಾಡುವ 18 ಸರ್ಕಲ್‍ಗಳಿಗೂ ಹೋಗಿ ಊಟ ಹಾಗೂ ನೀರಿನ ಬಾಟಲಿ ನೀಡಿದ್ದಾರೆ.
ಕೊರೊನಾ ಮೊದಲ ಅಲೆಯಲ್ಲೂ ಕೂಡ ಇದೇ ತಂಡ ಆಗಲೂ ಪೊಲೀಸರಿಗೆ ಮಧ್ಯಾಹ್ನದ ಊಟವಾಗಿ ಬಿರಿಯಾನಿ ನೀಡಿದ್ದರು. ಇದೇ ವೇಳೆ, ಕೇವಲ ಪೊಲೀಸರಿಗಷ್ಟೇ ಅಲ್ಲದೆ ನಗರದಲ್ಲಿ ಠಾಣೆಯಿಂದ ಠಾಣೆಗೆ ಸಂಚರಿಸುತ್ತಿರುವಾಗ ದಾರಿಯುದ್ಧಕ್ಕೂ ಸಿಕ್ಕ ಜನಸಾಮಾನ್ಯರು, ನಿರ್ಗತಿಕರು, ನಿರಾಶ್ರಿತರಿಗೂ ಬಿರಿಯಾನಿ ಹಾಗೂ ನೀರಿನ ಬಾಟಲಿ ನೀಡಿದ್ದಾರೆ. ಜೊತೆಗೆ ಇದೇ ಯುವಕರ ತಂಡ ಕೆಲ ಬಡವರಿಗೆ ಆಹಾರ ಸಾಮಾಗ್ರಿಯ ಕಿಟ್ ಕೂಡ ಹಂಚಿದ್ದಾರೆ.
ಪೊಲೀಸರು ಗೂಂಡಾಗಳಲ್ಲ. ಹೊಡೆಯುತ್ತಾರೆ ಎಂದು ಹೇಳೋದು ತಪ್ಪು. ಅವರು ಹೊಡೆಯುವು ನಮ್ಮ ಜೀವ ಉಳಿಸಲು. ಜನಸಾಮಾನ್ಯರು ಬೇಕಾಬಿಟ್ಟಿ ಓಡಾಡಬಾರದು. ಸರ್ಕಾರ ಹಾಗೂ ಪೊಲೀಸರಿಗೆ ಸಹಕಾರ ಕೊಡಬೇಕು. ಪೊಲೀಸರು ಇಡೀ ದಿನ ಬಿಸಿಲಲ್ಲಿ ನಿಂತು ನಮ್ಮನ್ನ ಕಾಯುತ್ತಾರೆ. ಅವರು ಹೊಡೆಯುವುದು ಕೂಡ ನಮ್ಮ ಒಳ್ಳೆದಕ್ಕೆ ಅವರೊಂದಿಗೆ ಸಹಕರಿಸುವಂತೆ ಜನಸಾಮಾನ್ಯರಿಗೆ ಮನವಿ ಮಾಡಿದ್ದಾರೆ.
ಇಂತಹಾ ಕಾಲದಲ್ಲ ಒಬ್ಬರು ಒಬ್ಬರಿಗೆ ಸಹಾಯ ಮಾಡಬೇಕು. ನಾವು ಮಾನವೀಯತೆಯಿಂದ ಈ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನ ನೋಡಿ ಮತ್ತಷ್ಟು ಜನ ಬಡವರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಉದ್ದೇಶ ಎನ್ನುವುದು ಯುವಕರ ಅಭಿಪ್ರಾಯ.

 
			

 
		 
		
 
                                
                              
		