-ರಾಜ್ಯದ ಮಠ ಮಾನ್ಯಗಳು ಸರ್ಕಾರದ ಪರ ಕೈ ಜೋಡಿಸಬೇಕು
ಶಿವಮೊಗ್ಗ: ಕೊರೊನಾ ಮಹಾಮಾರಿ ರಾಜ್ಯದ ಎಲ್ಲೆಡೆ ವ್ಯಾಪಿಸಿದ್ದು, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ತೊಲಗಿಸುವ ನಿಟ್ಟಿನಲ್ಲಿ ರಾಜ್ಯದ ಮಠ ಮಾನ್ಯಗಳು ಸಹ ತಮ್ಮ ತಮ್ಮ ಭಕ್ತರನ್ನು ಬಳಸಿಕೊಂಡು ಸೇವಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಮಠಾಧೀಶರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಠಗಳಿಗೆ ಸಂಬಂಧಿಸಿದ ಶಾಲೆಗಳು, ಹಾಸ್ಟೆಲ್ ಗಳ ನಿರ್ಮಾಣ, ನೂತನ ಮಠಗಳು, ದೇವಸ್ಥಾನಗಳ ನಿರ್ಮಾಣಕ್ಕೆ ರಾಜ್ಯದ ಮಠ-ಮಾನ್ಯಗಳಿಗೆ ಸಾಕಷ್ಟು ನೆರವು ನೀಡಿದೆ. ಇದೀಗ ಕೋವಿಡ್ ನಿಂದ ಸಂಕಷ್ಟದ ಪರಿಸ್ಥಿತಿ ಎದುರಾಗಿದ್ದು ಮಠ-ಮಾನ್ಯಗಳು ಸಹ ತಮ್ಮ ತಮ್ಮ ಭಕ್ತರ ಸಹಾಯ ಪಡೆದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸರ್ಕಾರದ ಪರ ಕೈ ಜೋಡಿಸಬೇಕು ಎಂದು ಮಠಾಧೀಶರಲ್ಲಿ ಶಿರ ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ಮನವಿ ಮಾಡುತ್ತೇನೆ ಎಂದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಆದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ರಾಜ್ಯದ ಜನರಿಗೆ ಏನೇನು ಅನುಕೂಲ ಮಾಡಬೇಕೋ ಅದೆಲ್ಲಾವನ್ನು ಮಾಡುತ್ತಿದ್ದೇವೆ. ಸಾಕಷ್ಟು ಕಡೆ ವ್ಯಾಕ್ಸಿನ್ ಉಚಿತವಾಗಿ ಕೊಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಕೊಡಬೇಕು ಎಂಬ ಚಿಂತನೆ ನಡೆಯುತ್ತಿದೆ. ಸರ್ಕಾರ ಏನೇನು ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದೆ. ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ಸರ್ಕಾರದ ಜೊತೆ ಕೈ ಜೋಡಿಸಬೇಕಿದೆ ಎಂದರು.