ಶಿವಮೊಗ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದು, ಸೋನಿಯಾ ಗಾಂಧಿಯವರನ್ನು ತೃಪ್ತಿಪಡಿಸುವುದೇ ಅವರ ಉದ್ದೇಶ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲೂ ಬುದ್ಧಿ ಬರಲ್ಲ. ಅವರದ್ದು ಇಟಲಿ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಅವರಿಗೆ ಗೊತ್ತಿಲ್ಲ. ಸೋನಿಯಾ ಗಾಂಧಿ ಅವರನ್ನು ತೃಪ್ತಿ ಪಡಿಸುವುದೇ ಅವರ ಉದ್ದೇಶ. ಎಲ್ಲ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಅವರಿಗೆ ಬುದ್ಧಿ ಬರುತ್ತಿಲ್ಲ. ನಳೀನ್ ಕುಮಾರ್ ಅವರಿಗೆ ವಿದೂಷಕ ಎಂಬ ಪದ ಬಳಸುತ್ತಿದ್ದಾರೆ. ನನಗೂ ಬುದ್ಧಿ ಇಲ್ಲ, ಮೆದುಳು ಇಲ್ಲ ಅನ್ನುತ್ತಿದ್ದರು. ನಾನು ಅದಕ್ಕೆ ಹುಚ್ಚ, ಬೆಪ್ಪ ಅಂತೆಲ್ಲಾ ಬಳಸಿದೆ ಎಂದು ತಿರುಗೇಟು ನೀಡಿದರು.
ಏಯ್ ಸಿದ್ದರಾಮಯ್ಯ ನಿನಗೆ ಬುದ್ಧಿ ಇಲ್ಲವೇನಲೇ ಎಂದು ನನಗೆ ಕೇಳುವುದಕ್ಕೆ ಬರಲ್ವಾ? ಆದರೆ ನಾನು ಬಳಸಲ್ಲ. ನೀವು ಮುಖ್ಯಮಂತ್ರಿ ಆಗಿದ್ದವರು ಭಾಷೆ ಬಳಸಬೇಕಾದರೆ ಎಚ್ಚರಿಕೆಯಿಂದ ಮಾತನಾಡಿ, ಇಲ್ಲ ನಾನೂ ಹೀಗೇ ಮಾತನಾಡೋದು, ಹೀಗೆ ಮಾತನಾಡಿದರೇ ಆತ್ಮಕ್ಕೆ ತೃಪ್ತಿ ಸಿಗೋದು ಎಂದರೆ ಬಳಸಿ, ನಾನು ಏನೂ ಹೇಳಲ್ಲ. ಸಿದ್ದರಾಮಯ್ಯ ನನ್ನ ಆತ್ಮೀಯರು ಹಾಗಾಗಿ ಇನ್ನಾದರೂ ತಿದ್ದಿಕೊಳ್ಳಲಿ ಎಂದರು.
ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಅಂತಾರೆ. ಡಿಕೆಶಿ ಯಾಕೆ ಜೈಲಿಗೆ ಹೋಗಿ ಬಂದ್ರು, ವಿರೋಧ ಪಕ್ಷದ ನಾಯಕರಾಗಿ ನೀವು ಯಾವ ಭ್ರಷ್ಟಾಚಾರ ಹೊರಗೆ ತೆಗೆದಿದ್ದೀರಿ. ಹಾಗಾದ್ರೆ ನೀವು ವಿರೋಧ ಪಕ್ಷದ ನಾಯಕರಾಗಿ ವಿಫಲರಾಗಿದ್ದೀರಾ ಎಂದು ಪ್ರಶ್ನಿಸಿದರು. ರಾಜ್ಯಪಾಲರಿಗೆ ನಾನು ದೂರು ಕೊಟ್ಟಿಲ್ಲ, ದೂರು ಕೊಡಲು ನಾನು ಅವರ ಬಳಿ ಹೋಗಿರಲಿಲ್ಲ. ಅವರು ಗುಜರಾತ್ ನಲ್ಲಿ ಅರ್ಥ ಸಚಿವರಾಗಿ 14 ಬಾರಿ ಬಜೆಟ್ ಮಂಡಿಸಿದ್ದಾರೆ. ಹೀಗಾಗಿ ನಿಯಮಗಳ ಬಗ್ಗೆ ಚರ್ಚೆ ಮಾಡಲು ಹೋಗಿದ್ದೆ. ನನ್ನ ಜೀವನದಲ್ಲೇ ನಮ್ಮ ಪಕ್ಷದವರ ವಿರುದ್ಧ ದೂರು ಕೊಟ್ಟಿಲ್ಲ, ಕೊಡುವುದಿಲ್ಲ ಎಂದರು.
ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ರಾಜ್ಯದಲ್ಲಿ ಗ್ರಾಮೀಣ ಕಾರ್ಯಪಡೆ ರಚನೆ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಗ್ರಾಮ ಮಟ್ಟಕ್ಕೂ ಗ್ರಾಮಪಡೆ ಇರುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಒಂದು ಗ್ರಾಮಪಡೆ ಕೆಲಸ ನಿರ್ವಹಿಸುತ್ತೆ. ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ಬೀಟ್ ಪೊಲೀಸ್, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆರು, ಆಶಾ ಕಾರ್ಯಕರ್ತೆಯರು, ನೋಂದಾಯಿತ ಸ್ಥಳೀಯ ವೈದ್ಯರು ಇರುತ್ತಾರೆ. ಗ್ರಾಮಗಳಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದರು.
ಹಣಕಾಸಿನ ವ್ಯವಸ್ಥೆಯನ್ನು ಇಲಾಖೆ ಮೂಲಕ ಮಾಡುತ್ತಿದ್ದೇವೆ. ಕೆಮ್ಮು, ನೆಗಡಿ, ಜ್ವರ ಕಾಣಿಸಿದರೆ ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಶಿಫ್ಟ್ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಕರ್ನಾಟಕದ ಎಲ್ಲ ಗ್ರಾಮಗಳಲ್ಲಿ ಈ ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಿಸಲಿದೆ. ತಕ್ಷಣದಿಂದಲೇ ಈ ಟಾಸ್ಕ್ ಫೋರ್ಸ್ ಜಾರಿಗೆ ಬರಲಿದೆ ಎಂದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಮಾಡಬಾರದು ಎಂದು ಹೇಳಿದರು. ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಉತ್ತಮವಾಗಿ ನಡೆಯಿತು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಮಾಡುತ್ತದೆ. ಪಶ್ಚಿಮ ಬಂಗಾಳ ಚುನಾವಣೆ ಬೇಡವೇ ಬೇಡ ಅಂತಾ ಕುಳಿತಿದ್ದರು. ಕೊಲೆಗಳು ಆಗುತ್ತಿವೆ, ಅಲ್ಲಿ ಕೋವಿಡ್ ನಿಂದ ಸಾಯುತ್ತಿಲ್ಲ. ರಾಜಕೀಯದಿಂದ ಸಾಯುತ್ತಿದ್ದಾರೆ. ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದಾಗ ಮಾಡುತ್ತೇವೆ ಎಂದರು.