ಮಾಜಿ ಸಚಿವ ಜಾರಕಿಹೊಳಿ ಕೇಸಿಗೆ ಕೋವಿಡ್ ಟ್ವಿಸ್ಟ್ – ರೇಪ್ ಕೇಸ್ ತನಿಖೆಗೆ ಅಡ್ಡಿಯಾಗುತ್ತಾ?

Public TV
2 Min Read

– ಮುಂದೇನಾಗುತ್ತೆ ಸಿಡಿ ಕೇಸ್? ಜಾರಕಿಹೊಳಿ ಪ್ಲಾನ್ ಏನು?

ಬೆಂಗಳೂರು: ಸಿಡಿ ಪ್ರಕರಣಕ್ಕೆ ಕೋವಿಡ್ ಟ್ವಿಸ್ಟ್ ಸಿಕ್ಕಿದೆ. ಇಂದು ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದ್ದ ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಕೊರೊನಾ ಸೋಂಕಿನಿಂದ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ಎಸ್‍ಐಟಿ ತನಿಖೆ ಇನ್ನಷ್ಟು ದಿನ ವಿಳಂಬವಾಗುವ ಸಾಧ್ಯತೆಗಳಿವೆ. ಜಾರಕಿಹೊಳಿ ಜೊತೆ ಅವರ ಕಾರಿನ ಚಾಲಕರು ಹಾಗೂ ಅಡುಗೆ ಭಟ್ಟನಿಗೂ ಸೋಂಕು ತಗುಲಿದೆ ಅಂತ ತಿಳಿದುಬಂದಿದೆ.

ಕಳೆದ ವಾರ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದ ನಂತ್ರ ನಾಪತ್ತೆಯಾಗಿದ್ದ ರಮೇಶ್ ಜಾರಕಿಹೊಳಿ, ನಿನ್ನೆ ರಾತ್ರಿ ಗೋಕಾಕ್‍ನ ಸರ್ಕಾರಿ ಆಸ್ಪತ್ರೆಗೆ ತೆರಳಿ, ಅಡ್ಮಿಟ್ ಆಗಿದ್ದಾರೆ. ರಮೇಶ್ ಜಾರಕಿಹೊಳಿಯವರಿಗೆ ಕೋವಿಡ್ ಸೇರಿ ಹಲವು ರೋಗಗಳು ಬಾಧಿಸುತ್ತಿವೆ. ಹೀಗಾಗಿ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಆಂಟೀನ್ ಮಾಹಿತಿ ನೀಡಿದ್ದಾರೆ. ಸದ್ಯದ ಪರಿಸ್ಥಿತಿ ಗಮನಿಸಿದ್ರೇ ರಮೇಶ್ ಜಾರಕಿಹೊಳಿ ಕನಿಷ್ಠ ಮೂರ್ನಾಲ್ಕು ದಿನವಾದರೂ ಐಸಿಯೂನಲ್ಲಿ ಇರಬೇಕಾಗಲಿದೆ ಅಂತ ವೈದ್ಯರು ತಿಳಿಸಿದ್ದಾರೆ.

ಇದಕ್ಕೂ ಮುನ್ನವೇ ಸಚಿವ ಬೈರತಿ ಬಸವರಾಜ್, ಜಾರಕಿಹೊಳಿಗೆ ಕೊರೋನಾ ಬಂದಿದೆ ಅಂತಾ ಹೇಳಿದ್ರು. ಯುವತಿಯ ವಕೀಲರು ಮಾತ್ರ ಜಾರಕಿಹೊಳಿಗೆ ಕೊರೊನಾ ಬಂದಿರೋ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರು. ಇದರ ಸತ್ಯಾಸತ್ಯತೆ ಅರಿಯಲು ಸಂತ್ರಸ್ತೆ ಪರ ವಕೀಲ ಜಗದೀಶ್, ತಮ್ಮ ಆಪ್ತ ವಕೀಲ ಚಂದನ್‍ರನ್ನು ಗೋಕಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಜಾರಕಿಹೊಳಿ ಬೆಂಬಲಿಗರು ವಕೀಲ ಚಂದನ್ ಅವರನ್ನು ಆಸ್ಪತ್ರೆ ಹೊರಗೆ ತಡೆದು ಗಲಾಟೆ ಮಾಡಿದ್ದಾರೆ. ಈ ಬೆನ್ನಲ್ಲೇ ಜಾರಕಿಹೊಳಿ ಐಸಿಯುನಲ್ಲಿರುವ ವಿಡಿಯೋ ರಿಲೀಸ್ ಆಗಿದೆ. ಜಾರಕಿಹೊಳಿ ಐಸಿಯುನಲ್ಲೇ ಇದ್ದಾರೆ ಎಂದು ಟಿಹೆಚ್‍ಓ ರವೀಂದ್ರ ಸ್ಪಷ್ಪಪಡಿಸಿದ್ದಾರೆ.

ವೈದ್ಯರ ಪ್ರಕಾರ ರಮೇಶ್ ಜಾರಕಿಹೊಳಿ ಆರೋಗ್ಯ ಸಮಸ್ಯೆಗಳು:
* ಉಸಿರಾಟದ ಸಮಸ್ಯೆ ತೀವ್ರ, ಕೃತಕ ಉಸಿರಾಟ ವ್ಯವಸ್ಥೆ
* ಮಧುಮೇಹದ ಪ್ರಮಾಣದಲ್ಲಿ ತೀವ್ರ ಏರಿಳಿತ
* ರಕ್ತದೊತ್ತಡದ ಪ್ರಮಾಣದಲ್ಲಿ ತೀವ್ರ ಏರಿಳಿತ
* ತೀವ್ರ ಜ್ವರ, ಕೆಮ್ಮು, ಮೈಕೈ ನೋವು
* ಕೋವಿಡ್ 19 ವೈರಸ್

ರಮೇಶ್ ಜಾರಕಿಹೊಳಿ ಟ್ರಾವೆಲ್ ಹಿಸ್ಟರಿ
* ಮಾ.29ರ ತಡರಾತ್ರಿ ಬೆಂಗಳೂರಿಂದ ಬೆಳಗಾವಿಗೆ ಆಗಮನ
* ರಸ್ತೆ ಮಾರ್ಗವಾಗಿ ಬೆಳಗಾವಿಯಿಂದ ಗೋಕಾಕ್‍ಗೆ ಪ್ರಯಾಣ
* ಮಾ.30ರಂದು ಗೋಕಾಕ್‍ನಿಂದ ಕೊಲ್ಹಾಪುರಕ್ಕೆ ಪ್ರಯಾಣ
(ರಸ್ತೆ ಮಾರ್ಗವಾಗಿ ಮಹಾಲಕ್ಷ್ಮಿದೇವಿ ದೇಗುಲಕ್ಕೆ ಆಗಮನ)
* ಮಾ.30 ಮತ್ತು 31ರಂದು ರಹಸ್ಯ ಸ್ಥಳದಲ್ಲಿ ವಾಸ್ತವ್ಯ
* ಏಪ್ರಿಲ್ 1ರಂದು ಗೋಕಾಕ್‍ಗೆ ವಾಪಸ್, ಜ್ವರ, ಕೆಮ್ಮು ಬಾಧೆ
* ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಜಾರಕಿಹೊಳಿಗೆ ಕೋವಿಡ್ ಟೆಸ್ಟ್
* ಏಪ್ರಿಲ್ 2ರಂದು ಕೋವಿಡ್ ಪಾಸಿಟಿವ್ ರಿಪೋರ್ಟ್, ಹೋಂ ಐಸೋಲೇಷನ್
* ಏಪ್ರಿಲ್ 4ರಂದು ರಾತ್ರಿ 10:30ಕ್ಕೆ ಉಸಿರಾಟ ಸಮಸ್ಯೆ ತೀವ್ರ
* ಗೋಕಾಕ್ ಸರ್ಕಾರಿ ಆಸ್ಪತ್ರೆಯ ಐಸಿಯುಗೆ ದಾಖಲು

ಜಾರಕಿಹೊಳಿ ಪ್ಲಾನ್ ಏನು?: ಕೊರೊನಾ ಸೋಂಕು ತಗುಲಿದ ಪರಿಣಾಮ ರಮೇಶ್ ಜಾರಕಿಹೊಳಿ ಕಡ್ಡಾಯವಾಗಿ ಕ್ವಾರಂಟೈನ್ ಪೂರ್ಣಗೊಳಿಸಬೇಕು. ಆರೋಪಿ ಸಿಗದ ಹಿನ್ನೆಲೆ ಸಿಡಿ ಪ್ರಕರಣದ ತನಿಖೆಗೆ ತಾತ್ಕಾಲಿಕ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಕೋವಿಡ್ ಕಾರಣದಿಂದ ರಮೇಶ್ ಜಾರಕಿಹೊಳಿ ಸುಮಾರು 24 ದಿನ ವಿಚಾರಣೆಯಿಂದ ವಿನಾಯಿತಿ ಪಡೆದು, ಸೇಫ್ ಆಗುವ ಬಗ್ಗೆ ಪ್ಲಾನ್ ಮಾಡಿಕೊಳ್ಳಬಹುದು ಅಥವಾ ಪ್ರಕರಣಕ್ಕೆ ಹೊಸ ತಿರುವು ಸಹ ಸಿಗಬಹುದು.

ಈ 24 ದಿನದಲ್ಲಿ ತನಿಖೆಯಲ್ಲಿ ಮಹತ್ವದ ಪ್ರಗತಿ ಆಗಬಹುದು. ಅಂದ್ರೆ ಬ್ಲಾಕ್‍ಮೇಲ್ ಪ್ರಕರಣದಲ್ಲಿ ಕಿಂಗ್‍ಪಿನ್‍ಗಳು ಬಂಧನವಾಗಬಹುದು. ಕಿಂಗ್‍ಪಿನ್‍ಗಳ ಬಂಧನದಿಂದ ಸಂತ್ರಸ್ತೆಗೆ ಸಂಕಷ್ಟ ಎದುರಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *