ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೋವಿಡ್ ಲಸಿಕಾ ಕೇಂದ್ರ ಆರಂಭ

Public TV
1 Min Read

ಹುಬ್ಬಳ್ಳಿ: ಲಸಿಕಾ ಕೇಂದ್ರ ಹೆಚ್ಚಳ ಮಾಡುವ ಸರ್ಕಾರದ ಉದ್ದೇಶದಂತೆ ವಿವಿಧೆಡೆ ಹೊಸ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ನಗರದ ವಿಮಾನ ನಿಲ್ದಾಣದಲ್ಲಿ ಸಹ ಲಸಿಕಾ ಕೇಂದ್ರ ತೆರೆಯಲಾಗಿದೆ.

ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ನಿರ್ದೇಶನದಂತೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೊರೊನಾ ಲಸಿಕಾ ಕೇಂದ್ರ ತೆರೆಯಲಾಗಿದೆ. ವಿಮಾನ ನಿಲ್ದಾಣದ ಸುಮಾರು 200 ಅರ್ಹ ಪಲಾನುಭವಿಗಳಿಗೆ ಹಾಗೂ ಇತರರಿಗೆ ಸ್ಥಳದಲ್ಲಿಯೇ ಲಸಿಕೆ ಹಾಕಲಾಗುತ್ತಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ, ಲಸಿಕಾ ಕೇಂದ್ರವನ್ನು ಪರಿಶೀಲಿಸಿದರು.

ಕೊರೊನಾ ಹಾಟ್‍ಸ್ಪಾಟ್ ಜಿಲ್ಲೆಗಳಲ್ಲಿ ಒಂದಾಗಿರುವ ಅವಳಿ ನಗರ ಹುಬ್ಬಳ್ಳಿ-ಧಾರವಾಡಗಳಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ಪ್ರತಿನಿತ್ಯ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ರ ಗಡಿ ದಾಟುತ್ತಿದೆ. ಅದರಲ್ಲೂ ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಹೀಗಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕಾಲೇಜ್ ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಕಳೆದ 5 ದಿನಗಳಿಂದ ಕಾಲೇಜು ಬಂದ್ ಮಾಡಲಾಗಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ ಧಾರವಾಡ ಜಿಲ್ಲೆಯಲ್ಲಿ ಪ್ರತಿನಿತ್ಯ ಕೇಸ್ ಗಳು ಹೆಚ್ಚಳವಾಗುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

Share This Article
Leave a Comment

Leave a Reply

Your email address will not be published. Required fields are marked *