ದೈವ ಸ್ಥಳಗಳನ್ನು ಅಪವಿತ್ರಗೊಳಿಸಿದ್ದ ಓರ್ವ ರಕ್ತಕಾರಿ ಸಾವು – ಇನ್ನಿಬ್ಬರು ದೈವಗಳ ಮುಂದೆ ಶರಣು

Public TV
2 Min Read

ಮಂಗಳೂರು: ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂಥವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಆದರೆ ಮಂಗಳೂರಿನಲ್ಲಿ ದೈವಸ್ಥಾನಗಳಿಗೆ ಅಪಚಾರ ಮಾಡಿದ ವ್ಯಕ್ತಿಯೊಬ್ಬ ರಕ್ತಕಾರಿ ಸಾವನ್ನಪ್ಪಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರು ದೈವಗಳ ಮುಂದೆ ಶರಣಾದ ಘಟನೆ ಇದೀಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಕರಾವಳಿ ಜಿಲ್ಲೆ ಭೂತರಾಧನೆಯ ತವರು ನೆಲ. ಇಲ್ಲಿನ ಜನ ದೈವಗಳ ಆರಾಧನೆಯನ್ನು ಮಾತ್ರ ಭಯ ಭಕ್ತಿಯಿಂದ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳೂರು ನಗರ ಭಾಗದಲ್ಲೇ ಕೆಲ ಸಮಯ ಹಿಂದೆ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ದೈವಸ್ಥಾನಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹಗಳ ಚೀಟಿ ಹಾಕಿ ಅಪವಿತ್ರಗೊಳಿಸುತ್ತಿದ್ದರು. ಆದರೆ ಈ ರೀತಿ ದುಷ್ಕೃತ್ಯ ಎಸಗಿದ ತಂಡ ಇದೀಗ ಸಂಕಷ್ಟಕ್ಕೆ ಒಳಗಾಗಿ ದೈವಗಳಿಗೆ ಶರಣಾಗಿದ್ದಾರೆ. ತಂಡದ ಓರ್ವ ವ್ಯಕ್ತಿ ರಕ್ತಕಾರಿ ಸಾವನ್ನಪ್ಪಿದ ಬಳಿಕ ದೈವಗಳಿಗೆ ತಪ್ಪು ಕಾಣಿಕೆ ಹಾಕಲು ಬಂದ ಇನ್ನಿಬ್ಬರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.

ಬಂಧನಕ್ಕೆ ಒಳಗಾಗಿರುವ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಎಂಬ ಇಬ್ಬರು ಮಂಗಳೂರು ಹೊರ ವಲಯದ ಜೋಕಟ್ಟೆ ನಿವಾಸಿಗಳು. ಇವರಿಬ್ಬರು ಹಾಗೂ ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಇದೇ ರೀತಿ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ್, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇವರು ಮಾಡಿದ ತಪ್ಪಿಗೆ ಇದೀಗ ದೈವಗಳೇ ಶಿಕ್ಷೆಯನ್ನು ನೀಡಿದೆ.

ನವಾಝ್ ತನ್ನನ್ನು ತಾನೂ ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ. ಆದರೆ ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ರಕ್ತವಾಂತಿ, ಭೇದಿಯಿಂದ ಕಂಗೆಟ್ಟಿದ್ದ. ಈ ಸಂದರ್ಭ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವ ಬಗ್ಗೆ ಇವರಲ್ಲಿ ಹೇಳಿಕೊಂಡಿದ್ದ. ಇದಾದ ಕೆಲ ದಿನಗಳ ಹಿಂದಷ್ಟೇ ರಕ್ತ ಕಾರಿ ಸತ್ತಿದ್ದ. ನವಾಝ್ ಸಾವನ್ನಪ್ಪಿದ ಬಳಿಕ ತೌಫಿಕ್‍ಗೂ ಇದೇ ರೀತಿ ಅನಾರೋಗ್ಯ ಕಾಡಿತ್ತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ತಾವು ಕೃತ್ಯ ಎಸಗಿದ್ದ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮುಂದೆಯೇ ತಪ್ಪು ಕಾಣಿಕೆ ಹಾಕಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಸದ್ಯ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನವಾಝ್ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಎಂಬುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ. ಸದ್ಯ ಕಾರಣಿಕ ಮೆರೆದಿರುವ ದೈವಗಳ ಬಗ್ಗೆ ಜನ ಕೊಂಡಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *