4 ದಿನ ನೇಪಾಳದಲ್ಲಿ ಶಾಲಾ, ಕಾಲೇಜುಗಳು ಬಂದ್‌

Public TV
1 Min Read

ಕಠ್ಮಂಡು: ಮುಂದಿನ 4 ದಿನಗಳ ಕಾಲ ರಾಷ್ಟ್ರದಲ್ಲಿರುವ ಎಲ್ಲ ಶಾಲೆ ಮತ್ತು ಕಾಲೇಜುಗಳನ್ನು ಬಂದ್‌ ಮಾಡುವ ನಿರ್ಧಾರವನ್ನು ನೇಪಾಳ ಸರ್ಕಾರ ಕೈಗೊಂಡಿದೆ.

ಕೊರೊನಾ ಕಾರಣಕ್ಕೆ ಶಾಲೆಗಳು ಬಂದ್‌ ಆಗುತ್ತಿಲ್ಲ. ವಿಪರೀತ ವಾಯುಮಾಲಿನ್ಯ ಕಾರಣದಿಂದ ಇದೇ ಮೊದಲ ಬಾರಿಗೆ ಏಪ್ರಿಲ್‌ 2ರವರೆಗೆ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಲಾಗುತ್ತಿದೆ.

ದಿನೇ ದಿನೇ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಉಸಿರಾಟ ಸಮಸ್ಯೆ ಮತ್ತು ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಮನೆಯಿಂದ ಹೊರಬಂದರೆ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸರ್ಕಾರ ತಿಳಿಸಿದೆ.

ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಕಾಡ್ಗಿಚ್ಚು ಆರಂಭವಾಗಿದ್ದು, ಮಾನ್ಸೂನ್ ಪ್ರಾರಂಭವಾಗುವವರೆಗೂ ಮುಂದುವರಿಯುತ್ತದೆ. ಏಪ್ರಿಲ್ ಕೊನೆಯ ವಾರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಾಡ್ಗಿಚ್ಚು ಸಂಭವಿಸುತ್ತದೆ.

ಅರಣ್ಯ ಮತ್ತು ಪರಿಸರ ಸಚಿವಾಲಯದ ಪ್ರಕಾರ, ನೇಪಾಳದಾದ್ಯಂತ ಇಲ್ಲಿಯವರೆಗೆ 480 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದೆ. ಪ್ರಮುಖ ನಗರಗಳ ವಾಯು ಗುಣಮಟ್ಟವು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಶುಕ್ರವಾರ ಕಠ್ಮಂಡು ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ  ಪಡೆದಿತ್ತು.

ವಾಯು ಮಾಲಿನ್ಯದ ಪ್ರಮಾಣದ ಎಷ್ಟಿದೆ ಎಂದರೆ ಹತ್ತಿರದಲ್ಲಿ ಕಾಣುತ್ತಿದ್ದ ಬೆಟ್ಟ ಗುಡ್ಡಗಳು ಸಹ ಕಾಣುತ್ತಿಲ್ಲ. ಕಳೆದ ಬುಧವಾರದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕಂಪನಿಗಳು ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *