ರಿಯಲ್ ಲೈಫ್ ಮುನ್ನಬಾಯ್ MBBS – ಮತ್ತೊಬ್ಬರ ಕೈನಲ್ಲಿ ಮೆಡಿಕಲ್ ಎಕ್ಸಾಂ ಬರೆಸಿದ ಭೂಪ

Public TV
2 Min Read

ಜೈಪುರ: ಬಾಲಿವುಡ್‍ನ ಫೇಮಸ್ ಚಲನಚಿತ್ರ ಮುನ್ನಬಾಯ್ ಎಂಬಿಬಿಎಸ್ ಸಿನಿಮಾದ ರೀತಿಯ ಘಟನೆಯೊಂದು ನಿಜ ಜೀವನದಲ್ಲಿ ನಡೆದಿದೆ. ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದ ವ್ಯಕ್ತಿಯೋರ್ವ ಪರೀಕ್ಷೆ ಬರೆಯಲು ಮತ್ತೊಬ್ಬ ವ್ಯಕ್ತಿಯನ್ನು ತನ್ನ ಜಾಗದಲ್ಲಿ ಕೂರಿಸಿದ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮನೋಹರ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಜಸ್ಥಾನ ಪಾಲಿ ಜಿಲ್ಲೆಯ ನಿವಾಸಿಯಾಗಿದ್ದಾನೆ. ಆರೋಪಿ ಮನೋಹರ್ ಸಿಂಗ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‍ಬಿಇ) ನಡೆಸಿದ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಬರೆಯಲು ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದನು.

ಇತರ ದೇಶಗಳ ಪ್ರಾಥಮಿಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾರತೀಯರಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೊನೆಯ ಎಫ್‍ಎಂಜಿಇ ಸ್ಕ್ರೀನಿಂಗ್ ಪರೀಕ್ಷೆಯನ್ನು 2020ರ ಡಿಸೆಂಬರ್ 4 ರಂದು ನಡೆಸಲಾಗಿತ್ತು ಮತ್ತು ಮನೋಹರ್ ಸಿಂಗ್‍ಗೆ ಮಥುರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗಿತ್ತು. ಪರೀಕ್ಷೆ ವೇಳೆ ಅರ್ಜಿ ನಮೂನೆಯಲ್ಲಿ ಸಲ್ಲಿಸಲಾಗಿದ್ದ ಫೋಟೋ ಮತ್ತು ಪರೀಕ್ಷಾ ದಿನದಂದು ತೆಗೆದ ಎರಡು ಫೋಟೋಗಳ ನಡುವೆ ಹೊಂದಾಣಿಕೆಯಿಲ್ಲದಿರುವುದರಿಂದ ಮನೋಹರ್ ಸಿಂಗ್‍ನನ್ನು ಫೇಸ್ ಐಡಿ ಪರಿಶೀಲನೆ ನಡೆಸಲು ಫೆಬ್ರವರಿ 13ರಂದು ಕರೆಯಲಾಗಿತ್ತು. ಆದರೆ ಆತ ಪರಿಶೀಲನೆಗೆ ಬಂದಿರಲಿಲ್ಲ.

ಬುಧವಾರ ಫೇಸ್ ಐಡಿ ಪರಿಶೀಲನೆಗೆಂದು ಮನೋಹರ್ ಸಿಂಗ್ ಎನ್‍ಇಬಿಗೆ ಭೇಟಿ ನೀಡಿದ್ದನು. ಈ ವೇಳೆ ಪರೀಕ್ಷೆಯ ದಿನದಂದು ತೆಗೆದ ಫೋಟೋದೊಂದಿಗೆ ಫೇಸ್ ಐಡಿ ಕುರಿತಂತೆ ಪರಿಶೀಲನೆ ನಡೆಸಿದಾಗ ಹೊಂದಾಣಿಕೆ ಕಂಡು ಬಂದಿಲ್ಲ. ಹೀಗಾಗಿ ಆರೋಪಿಯನ್ನು ಪ್ರಶ್ನಿಸಿದಾಗ ತಪ್ಪಾಗಿ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆತನ ಬಳಿ ಇದ್ದ ಪರೀಕ್ಷಾ ಪ್ರವೇಶ ಪತ್ರ, ಎಂಬಿಬಿಎಸ್ ಪದವಿ ಅರ್ಜಿ ನಮೂನೆಗಳನ್ನು ವಶಪಡಿಸಿಕೊಂಡಿರುವುದಾಗಿ ಎಂದು ಉಪ ಪೊಲೀಸ್ ಆಯುಕ್ತ(ಆಗ್ನೇಯ) ಆರ್ ಪಿ ಮೀನಾ ತಿಳಿಸಿದ್ದಾರೆ.

ಬಳಿಕ ವಿಚಾರಣೆ ವೇಳೆ, ಆರೋಪಿ ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದು, ಆರು ವರ್ಷಗಳಿಂದ ಎಫ್‍ಎಂಜಿಇ ಪರೀಕ್ಷೆ ಪಾಸ್ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಪರೀಕ್ಷೆ ಬರೆಯಲು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದು ಮನೋಹರ್ ಸಿಂಗ್ ಬಳಿ ವೈದ್ಯ 4 ಲಕ್ಷ ರೂ. ಪಡೆದಿರುವುದಾಗಿ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *