ಒಂದು ಕಾಲದ ಅತ್ಯಾಪ್ತನನ್ನ ದೀದಿ ವಿರುದ್ಧ ಕಣಕ್ಕಿಳಿಸಿದ ಬಿಜೆಪಿ

Public TV
2 Min Read

– ಬಿಜೆಪಿಯ 57 ಅಭ್ಯರ್ಥಿಗಳ ಹೆಸರು ಪ್ರಕಟ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸುವ ನಂದಿಗ್ರಾಮದಿಂದ ಒಂದು ಕಾಲದ ಟಿಎಂಸಿ ಪ್ರಮುಖ ನಾಯಕ, ದೀದಿಯ ಅತ್ಯಾಪ್ತ ಸುವೇಂದು ಅಧಿಕಾರಿಯನ್ನ ಬಿಜೆಪಿ ಕಣಕ್ಕಿಳಿಸಿದೆ.

ಟಿಎಂಸಿ ತೊರೆದು ಬಿಜೆಪಿ ಸೇರಿದಾಗಿನಿಂದಲೂ ಸುವೇಂದು ಅಧಿಕಾರಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಈ ಬಾರಿ ಕ್ಷೇತ್ರ ಬದಲಿಸಿ ನಂದಿಗ್ರಾಮ ಆಯ್ಕೆ ಮಾಡಿಕೊಳ್ಳುವ ಮೂಲಕ ಸುವೇಂದು ಅಧಿಕಾರಿಗೆ ಮಮತಾ ಬ್ಯಾನರ್ಜಿ ಸವಾಲ್ ಎಸೆದಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂದು ಸಂಜೆ ದೆಹಲಿಯಲ್ಲಿ 57 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದರು. ಮಾಜಿ ಕ್ರಿಕೆಟಿಗ ಅಶೋಕ್ ಡಿಂಡಾಗೂ ಬಿಜೆಪಿ ಟಿಕೆಟ್ ನೀಡಿದೆ.

ಶುಕ್ರವಾರ ಮಮತಾ ಬ್ಯಾನರ್ಜಿ ಒಂದೇ ಪಟ್ಟಿಯಲ್ಲಿಯೇ 291 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ 20 ಬದಲಾಗಿ 120 ಸಮಾವೇಶ ನಡೆಸಿದ್ರೂ ಗೆಲುವು ನಮ್ಮದೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 291 ಅಭ್ಯರ್ಥಿಗಳ ಹೆಸರು ಘೋಷಿಸಿದ ದೀದಿ – ಟಿಕೆಟ್ ಹಂಚಿಕೆ ಲೆಕ್ಕಾಚಾರ ಹೀಗಿದೆ

ಇತ್ತ ಪಕ್ಷಾಂತರ ಪರ್ವ ಮುಂದುವರಿದಿದ್ದು, ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಮಲ ಹಿಡಿದ ಬಳಿಕ ಪ್ರತಿಕ್ರಿಯಿಸಿರುವ ದಿನೇಶ್ ತ್ರಿವೇದಿ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಚುನಾವಣೆ ಪ್ರಕ್ರಿಯೆಯಲ್ಲಿ ಆ್ಯಕ್ಟಿವ್ ಆಗಿರುತ್ತೇನೆ. ಬಂಗಾಳ ಟಿಎಂಸಿಯನ್ನು ತಿರಸ್ಕರಿಸಿದೆ. ಜನತೆ ಪ್ರಗತಿ ಬಯಸಿದ್ದಾರೆ, ಭ್ರಷ್ಟಾಚಾರ ಅಥವಾ ಹಿಂಸಾಚಾರವನ್ನಲ್ಲ. ನಿಜವಾದ ಬದಲಾವಣೆಗೆ ಜನತೆ ಸಿದ್ಧರಾಗಿದ್ದಾರೆ. ರಾಜಕೀಯ ಆಟವಲ್ಲ, ಅದೊಂದು ಗಂಭೀರ ವಿಚಾರ. ಸಿಎಂ ಮಮತಾ ಬ್ಯಾನರ್ಜಿ ಆಟವಾಡುವ ಭರದಲ್ಲಿ ತಮ್ಮ ಆದರ್ಶಗಳನ್ನು ಮರೆತಿದ್ದಾರೆ ಎಂದು ಅವರ ಹೆಸರನ್ನು ಹೇಳದೆ ತ್ರಿವೇದಿ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ:  ಪ್ರಧಾನಿಗಳು 20 ಅಲ್ಲ 120 ರ‍್ಯಾಲಿ ನಡೆಸಲಿ, ಗೆಲ್ಲೋದು ನಾವೇ: ದೀದಿ ಸವಾಲ್

ಪಶ್ಚಿಮ ಬಂಗಾಳದ 294 ಕ್ಷೇತ್ರಗಳಿಗೆ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27 ಮೊದಲ ಹಂತದ ಮತದಾನ ನಡೆಯಲಿದೆ. ತದನಂತರ ಏಪ್ರಿಲ್ 1, 6, 10, 17, 22, 26, 29 ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ:  ಟಿಎಂಸಿ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆ

Share This Article
Leave a Comment

Leave a Reply

Your email address will not be published. Required fields are marked *